ನವದೆಹಲಿ: ಮನೀಶ್ ಸಿಸೋಡಿಯಾ ಬಳಿ ಯಾವುದೇ ಹಣ ಪತ್ತೆಯಾಗಿಲ್ಲ ಎಂದು ದೆಹಲಿಯಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಮಾಹಿತಿ ನೀಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮನೀಶ್ ಸಿಸೋಡಿಯಾ ಬಿಜೆಪಿಗೆ ಸೇರ್ಪಡೆಯಾದರೆ ಇವತ್ತೇ ಬಿಡುಗಡೆಯಾಗುತ್ತಾರೆ. ಆಮ್ ಆದ್ಮಿ ಪಕ್ಷದ ಏಳಿಗೆಯನ್ನು ಸಹಿಸದೇ ಪ್ರಧಾನಿ ಮೋದಿ ಕಿರುಕುಳ ನೀಡುತ್ತಿದ್ದಾರೆ. ಬಿಜೆಪಿ ಷಡ್ಯಂತ್ರವನ್ನು ಮನೆ ಮನೆಗೆ ಭೇಟಿ ನೀಡಿ ಪ್ರಚಾರ ಮಾಡುತ್ತೇವೆ. ಅಬಕಾರಿ ನೀತಿ ಪರಿಷ್ಕರಣೆಯಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ. ಆಮ್ ಆದ್ಮಿ ಅಭಿವೃದ್ಧಿ ಕಾರ್ಯಗಳಿಗೆ ಬಿಜೆಪಿ ಅಡ್ಡಿಪಡಿಸುತ್ತಿದೆ ಎಂದು ಆರೋಪಿಸಿದ್ದಾರೆ.
ಮನೀಶ್ ಸಿಸೋಡಿಯಾ ಮತ್ತು ಸತ್ಯೇಂದ್ರ ಜೈನ್ ಬಿಜೆಪಿಗೆ ಸೇರಿದರೆ ನಾಳೆಯೇ ಪ್ರಕರಣದಿಂದ ಮುಕ್ತವಾಗುತ್ತೇವೆ. ನಮ್ಮ ಸಚಿವರನ್ನು ಸುಳ್ಳು ಪ್ರಕರಣಗಳಲ್ಲಿ ಬಂಧಿಸುವ ಮೂಲಕ ದೆಹಲಿಯ ಕೆಲಸವನ್ನು ನಿಲ್ಲಿಸಲು ಬಿಜೆಪಿ ಬಯಸುತ್ತಿದೆ ಎಂದು ಕಿಡಿಕಾರಿದ್ದಾರೆ.
ನಾವು ಪಂಜಾಬ್ ಗೆದ್ದಾಗಿನಿಂದ ಅವರಿಗೆ ನಮ್ಮನ್ನು ಸಹಿಸಲಾಗುತ್ತಿಲ್ಲ. ಭ್ರಷ್ಟಾಚಾರ ವಿಷಯವಲ್ಲ. ಮಂತ್ರಿಗಳು ಮಾಡಿದ ಒಳ್ಳೆಯ ಕೆಲಸಗಳನ್ನು ನಿಲ್ಲಿಸುವ ಉದ್ದೇಶವಿದೆ. ಮನೀಶ್ ಸಿಸೋಡಿಯಾ ಅವರು ಬಿಜೆಪಿ ಸೇರಿದರೆ ನಾಳೆಯೊಳಗೆ ಅವರು ಮುಕ್ತರಾಗುತ್ತಾರೆ ಎಂದು ಕೇಜ್ರಿವಾಲ್ ಹೇಳಿದ್ದಾರೆ.