ಮಾಸ್ಕೋ: ಸಮುದ್ರಕ್ಕೆ ಅಪ್ಪಳಿಸಿದ ರಷ್ಯಾ ವಿಮಾನದಲ್ಲಿದ್ದ ಎಲ್ಲ 28 ಜನ ಸಾವನ್ನಪ್ಪಿದ್ದಾರೆ. ಮಂಗಳವಾರ 28 ಜನರನ್ನು ಹೊತ್ತ ವಿಮಾನ ನಾಪತ್ತೆಯಾಗಿ ಅಪಘಾತಕ್ಕೀಡಾದ ನಂತರ ಯಾರೂ ಬದುಕುಳಿದಿಲ್ಲ ಎಂದು ರಷ್ಯಾ ಅಧಿಕಾರಿಗಳನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆಗಳು ವರದಿ ಮಾಡಿವೆ.
ಪ್ರಾದೇಶಿಕ ರಾಜಧಾನಿ ಪೆಟ್ರೊಪಾವ್ಲೋವ್ಸ್ಕ್-ಕಾಮ್ಚಾಟ್ಸ್ಕಿಯಿಂದ ಆಂಟೊನೊವ್ ಆನ್ -26 ಅವಳಿ-ಎಂಜಿನ್ ಟರ್ಬೊಪ್ರೊಪ್ ವಿಮಾನ ಕಮ್ಚಟ್ಕಾ ಪರ್ಯಾಯ ದ್ವೀಪದ ಉತ್ತರದ ಪಲಾನಾ ಎಂಬ ಹಳ್ಳಿಗೆ ಹೋಗುವ ಮಾರ್ಗದಲ್ಲಿ ವಾಯು ಸಂಚಾರ ನಿಯಂತ್ರಣದೊಂದಿಗೆ ಸಂಪರ್ಕವನ್ನು ಕಳೆದುಕೊಂಡಿತ್ತು ಎಂದು ತುರ್ತು ಸಚಿವಾಲಯ ತಿಳಿಸಿದೆ.
ತುರ್ತು ಸಚಿವಾಲಯ ಹೆಲಿಕಾಪ್ಟರ್ ಅನ್ನು ರವಾನಿಸಿದ ನಂತರ ಮತ್ತು ಕಾಣೆಯಾದ ವಿಮಾನವನ್ನು ಹುಡುಕಲು ತಂಡಗಳನ್ನು ನಿಯೋಜಿಸಿದ ನಂತರ ವಿಮಾನದ ಅಪಘಾತದ ಸ್ಥಳ ಪತ್ತೆಯಾಗಿದೆ ಎಂದು ರಷ್ಯಾದ ನಾಗರಿಕ ವಿಮಾನಯಾನ ಪ್ರಾಧಿಕಾರ ದೃಢಪಡಿಸಿದೆ.
ವಿಮಾನದಲ್ಲಿ 22 ಪ್ರಯಾಣಿಕರು ಮತ್ತು ಆರು ಸಿಬ್ಬಂದಿ ಇದ್ದರು ಎಂದು ಸಚಿವಾಲಯ ತಿಳಿಸಿದ್ದು, ಮೃತರಲ್ಲಿ ಪಲಾನಾ ಮೇಯರ್ ಓಲ್ಗಾ ಮೊಖಿರೇವಾ ಒಬ್ಬರಾಗಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ಹೇಳಿದ್ದಾರೆ.
ವಿಮಾನ ಕಾಣೆಯಾದ ಸಮಯದಲ್ಲಿ ಈ ಪ್ರದೇಶದಲ್ಲಿ ಹವಾಮಾನ ವೈಪರೀತ್ಯವಾಗಿ ಮೋಡ ಕವಿದ ವಾತಾವರಣ ಇತ್ತು. ಅಪಘಾತಕ್ಕೀಡಾದ ವಿಮಾನ 1982 ರಿಂದ ಸೇವೆಯಲ್ಲಿದೆ ಎಂದು ಹೇಳಲಾಗಿದೆ.