ಮುಂಬೈ: ಗಂಡನಂತೆ ಬದುಕುವ ಹಕ್ಕು ವಿಚ್ಛೇದಿತ ಪತ್ನಿಗೂ ಇದೆ ಎಂದು ಮುಂಬೈ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಬೇರೆಯವರ ಜೊತೆ ಸಂಬಂಧ ಹೊಂದಿದ ಮಾತ್ರಕ್ಕೆ ಆಕೆಗೆ ಜೀವನಾಂಶ ನೀಡುವುದನ್ನು ನಿರಾಕರಿಸುವಂತಿಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಗಂಡನಿಂದ ವಿಚ್ಛೇದನ ಪಡೆದುಕೊಂಡ ಮಹಿಳೆ ಎಲ್ಲರಂತೆ ಜೀವನ ನಡೆಸುವ ಹಕ್ಕು ಹೊಂದಿದ್ದಾರೆ. ಬೇರೆಯವರೊಂದಿಗೆ ಸಂಬಂಧ ಹೊಂದಿದ ಮಾತ್ರಕ್ಕೆ ಆಕೆಗೆ ಜೀವನಾಂಶ ನೀಡುವುದನ್ನು ನಿರಾಕರಿಸುವಂತಿಲ್ಲ ಎಂದು ಹೇಳಿದ ಮುಂಬೈ ಹೈಕೋರ್ಟ್, ಸೆಷನ್ಸ್ ಕೋರ್ಟ್ ಆದೇಶವನ್ನು ವಜಾಗೊಳಿಸಿದೆ.
ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಮೂರ್ತಿ ಪ್ರಕಾಶ್ ನಾಯ್ಕ್ ಅವರು, ಸಂಗಾತಿ ಐಷಾರಾಮಿ ಜೀವನ ನಡೆಸುತ್ತಿದ್ದರೆ ಮತ್ತೊಬ್ಬರು ಸಂಕಟದಲ್ಲಿಯೇ ಬದುಕಬೇಕೆ ಎಂದು ಪ್ರಶ್ನಿಸಿದ್ದಾರೆ. ವಿಚ್ಛೇದನ ಪಡೆದುಕೊಂಡ ಪತ್ನಿ ಮತ್ತೊಬ್ಬರೊಂದಿಗೆ ಸಂಬಂಧ ಹೊಂದಿದ ಮಾತ್ರಕ್ಕೆ ಜೀವನಾಂಶಕ್ಕೆ ಅರ್ಹತೆ ಹೊಂದಿಲ್ಲ ಎನ್ನುವ ಸೆಷನ್ಸ್ ಕೋರ್ಟ್ ಆದೇಶ ಸಮಂಜಸವಲ್ಲ ಎಂದು ಹೇಳಿದ್ದಾರೆ.
2017ರಲ್ಲಿ ಮದುವೆಯಾಗಿದ್ದ ದಂಪತಿ 2020 ರಲ್ಲಿ ಡೈವೋರ್ಸ್ ಗಾಗಿ ಕೋರ್ಟ್ ಮೆಟ್ಟಿಲೇರಿದ್ದರು. ಕೌಟುಂಬಿಕ ದೌರ್ಜನ್ಯ ಕಾಯ್ದೆಯಡಿ ಪತಿಯ ವಿರುದ್ಧ ಪತ್ನಿ ಕುಟುಂಬದವರು ದೂರು ದಾಖಲಿಸಿದ್ದು, ಮ್ಯಾಜಿಸ್ಟ್ರೇಟ್ ಕೋರ್ಟ್ ವಿಚ್ಛೇದಿತ ಪತ್ನಿಗೆ ಮಾಸಿಕ 75,000 ಮಧ್ಯಂತರ ಪರಿಹಾರ ಹಾಗೂ ಮನೆ ಬಾಡಿಗೆಗೆ 35 ಸಾವಿರ ರೂ. ಕೊಡುವಂತೆ 2021ರ ಆಗಸ್ಟ್ ನಲ್ಲಿ ಆದೇಶಿಸಿತ್ತು. ಮ್ಯಾಜಿಸ್ಟ್ರೇಟ್ ಕೋರ್ಟ್ ಆದೇಶವನ್ನು 2021ರ ಡಿಸೆಂಬರ್ ನಲ್ಲಿ ಸೆಷನ್ಸ್ ಕೋರ್ಟ್ ರದ್ದುಗೊಳಿಸಿತ್ತು.
ಇದನ್ನು ಪ್ರಶ್ನಿಸಿ ವಿಚ್ಛೇದಿತ ಪತ್ನಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಎರಡು ಕುಟುಂಬದ ಆದಾಯ ಪರಿಶೀಲನೆಯ ನಂತರ ಹೈಕೋರ್ಟ್ ನ್ಯಾಯಮೂರ್ತಿ ಪ್ರಕಾಶ್ ನಾಯ್ಕ್ ಅವರಿದ್ದ ಪೀಠ, ಮಾಸಿಕ 75,000 ಮಧ್ಯಂತರ ಪರಿಹಾರ ನೀಡುವಂತೆ ತೀರ್ಪು ನೀಡಿದ್ದು, ಪ್ರತ್ಯೇಕವಾಗಿ ವಾಸವಾಗಿರುವ ಮಹಿಳೆಯ ಅಗತ್ಯತೆಗಳಿಗೆ ಪರಿಹಾರ ಪಡೆಯುವುದು ಆಕೆಯ ಹಕ್ಕು ಎಂದು ಹೇಳಿದೆ.