ಬೆಂಗಳೂರು: ಬದಲಾವಣೆಯಾಗುತ್ತಿರುವ ಕಾಲಘಟ್ಟ ಮತ್ತು ಏರಿಕೆಯಾಗುತ್ತಿರುವ ಜೀವನ ವೆಚ್ಚ ಆಧರಿಸಿ ಜೀವನಾಂಶ ಮೊತ್ತವನ್ನು ಹೈಕೋರ್ಟ್ 10 ರಿಂದ 20 ಸಾವಿರ ರೂ.ಗೆ ಹೆಚ್ಚಳ ಮಾಡಿ ಆದೇಶಿಸಿದೆ.
ಬೆಂಗಳೂರಿನ ವಿನೀತಾ ಥಾಮಸ್ ಎಂಬುವರು ಈ ಕುರಿತಾಗಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ಮಾನ್ಯ ಮಾಡಿದೆ. ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕ ಸದಸ್ಯ ಪೀಠ, ಬದಲಾವಣೆಯಾಗುತ್ತಿರುವ ಕಾಲಘಟ್ಟದಲ್ಲಿ ಪತ್ನಿ ಬದುಕುತ್ತಿರುವ ರೀತಿ, ಏರಿಕೆ ಆಗುತ್ತಿರುವ ಜೀವನ ಹೆಚ್ಚು ಇತರ ವಿವರಗಳನ್ನು ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಡಬೇಕು. ಈ ಅಂಶಗಳನ್ನು ಪರಿಗಣಿಸಿ ಜೀವನಾಂಶ ಮೊತ್ತ ಹೆಚ್ಚಳ ಮಾಡುವ ಬಗ್ಗೆ ಕೋರ್ಟ್ ಗಳು ತೀರ್ಮಾನಿಸಬೇಕಾಗುತ್ತದೆ ಎಂದು ಹೇಳಿದೆ.
ವಿಶೇಷ ಮದುವೆ ಕಾಯಿದೆ ಸೆಕ್ಷನ್ 37ರ ಅಡಿ ಜೀವನಾಂಶ ಹೆಚ್ಚಳ ಮಾಡುವಂತೆ ಕೋರಿ ಅರ್ಜಿದಾರರು ಸಲ್ಲಿಸಿದ್ದ ಅರ್ಜಿಯನ್ನು ಬೆಂಗಳೂರಿನ ಕೌಟುಂಬಿಕ ನ್ಯಾಯಾಲಯ ತಿರಸ್ಕರಿಸಿದ್ದು, ಈ ಆದೇಶವನ್ನು ಹೈಕೋರ್ಟ್ ನ್ಯಾಯಪೀಠ ರದ್ದುಗೊಳಿಸಿದೆ.
ಪತಿ ಆದಾಯ ಉತ್ತಮವಾಗಿದೆ ಎನ್ನುವ ಕಾರಣಕ್ಕೆ ಜೀವನಾಂಶ ನೀಡಬೇಕೆಂಬ ವಾದವನ್ನು ಕೌಟುಂಬಿಕ ನ್ಯಾಯಾಲಯ ತಿರಸ್ಕರಿಸಿದ್ದು, ಆ ಅಭಿಪ್ರಾಯವನ್ನು ಕೂಡ ಹೈಕೋರ್ಟ್ ನ್ಯಾಯಪೀಠ ತಿರಸ್ಕರಿಸಿದೆ.
ಸುಪ್ರೀಂ ಕೋರ್ಟ್ ಪ್ರಕರಣ ಒಂದರಲ್ಲಿ ಒಮ್ಮೆ ಜೀವನಾಂಶ ನಿಗದಿಪಡಿಸಿದ ನಂತರವೂ ನ್ಯಾಯಾಲಯಗಳು ಜೀವನ ವೆಚ್ಚ ಏರಿಕೆ ಮತ್ತಿತರ ಅಂಶ ಪರಿಗಣಿಸಿ ಜೀವನಾಂಶ ಹೆಚ್ಚಳ ಮಾಡಬಹುದು ಎಂದು ಆದೇಶ ನೀಡಿದೆ ಎನ್ನುವ ಅಂಶವನ್ನು ಹೈಕೋರ್ಟ್ ಉಲ್ಲೇಖಿಸಿದೆ.
ಪತಿಯ ಆದಾಯ ತಿಂಗಳಿಗೆ ಒಂದೂವರೆ ಲಕ್ಷದಿಂದ ಎರಡು ಲಕ್ಷ ರೂಪಾಯಿಯಷ್ಟಿದ್ದು, ಇಂತಹ ಸಂದರ್ಭದಲ್ಲಿ ಕೌಟುಂಬಿಕ ನ್ಯಾಯಾಲಯ ಜೀವನಾಂಶ ಹೆಚ್ಚಳ ಸಾಧ್ಯವಿಲ್ಲವೆಂದು ಹೇಳಿರುವುದು ಸರಿಯಲ್ಲ ಮತ್ತು ಸಮಂಜಸ ಕೂಡ ಅಲ್ಲ. 2016ರಲ್ಲಿ ಅರ್ಜಿದಾರರಿಗೆ ಮಾಸಿಕ 10 ಸಾವಿರ ರೂ. ಜೀವನಾಂಶ ನಿಗದಿಪಡಿಸಲಾಗಿದ್ದು, ಜೀವನ ವೆಚ್ಚ ಹೆಚ್ಚಳ ಮತ್ತಿತರ ಹಲವು ಕಾರಣಗಳಿಂದ ಜೀವನಾಂಶ ಹೆಚ್ಚಳ ಮಾಡಲೇಬೇಕಾದ ಅನಿವಾರ್ಯತೆ ಇದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.