ಆಲಿಯಾ ಭಟ್ ಯಾರಿಗೆ ಗೊತ್ತಿಲ್ಲ ಹೇಳಿ ? ಇತ್ತೀಚಿಗೆ ಮಾನ್ಯವಾರ್ ಎಂಬ ಬಟ್ಟೆ ಬ್ರಾಂಡ್ ಜಾಹಿರಾತಿನಲ್ಲಿ ಕಾಣಿಸಿಕೊಂಡಿದ್ದಾರೆ, ಅದರಲ್ಲಿ ಆಕೆ ವಧುವಿನಂತೆ ಕಂಗೊಳಿಸಿದ್ದು, ಜಾಹಿರಾತಿನ ಮೇಲೆ ಈಗ ಬಹಳಷ್ಟು ಚರ್ಚೆ ನಡೆಯುತ್ತಿದೆ. ಯಾಕೆ ಅಂತೀರಾ? ಇಲ್ಲಿ ಓದಿ ನೋಡಿ !
ಆಲಿಯಾ ಕೆಂಪನೆಯ ಲೆಹೆಂಗಾ ಧರಿಸಿ ವಧುವಿನಂತೆ ಕಂಗೊಳಿಸುತ್ತಾ ಮದುವೆ ಮಂಟಪಕ್ಕೆ ಬಂದು ಕೂತುಕೊಂಡು, ತನ್ನ ಅಜ್ಜಿ “ನೀನು ಬೇರೆ ಮನೆಗೆ ಹೋದಾಗ ತುಂಬಾ ನೆನಪಿಸಿಕೊಳ್ಳುತ್ತೇನೆ” ಎಂದದ್ದನ್ನು, ತಂದೆ ತಾನು ಕೇಳಿದ್ದನ್ನು ಕೊಡಿಸುತ್ತಿದ್ದಾಗ, ನೆಂಟರು “ಬೇರೆಯವರ ಆಸ್ತಿ ಇವಳು, ಇವಳಿಗೇಕೆ ಅಷ್ಟೊಂದು ಮಾಡುತ್ತೀಯಾ” ಅನ್ನೋದನ್ನ ಹಾಗೂ ತಾಯಿ “ನೀನು ಬೇರೆ ಕಡೆ ಹಾರಿ ಹೋಗುವ ಪಕ್ಷಿ ” ಅನ್ನುತ್ತಿದ್ದನ್ನು ನೆನಸಿಕೊಳ್ಳುತ್ತಲೇ ಹಳೆಯ ಮಾತುಗಳನ್ನು ಮೆಲುಕು ಹಾಕುತ್ತಾರೆ.
ಅಷ್ಟೇ ಅಲ್ಲ, ನಾನು ಬೇರೆ ಮನೆಗೆ ಹೋದರೇನು ? ಅಪ್ಪನ ಮನೆ ನನ್ನದಲ್ಲವೇನು ? ನಾನು ಬೇರೆಯವರ ಆಸ್ತಿಯಲ್ಲ ಹಾಗೂ ನಾನು ಪಕ್ಷಿ ಆಗಿದ್ದರೆ, ಇಡೀ ಆಕಾಶವೇ ನನ್ನದಲ್ಲವೇ ಎಂದು ಪ್ರಶ್ನಿಸಿ, ಕನ್ಯಾದಾನ ಅನ್ನೋಕೆ ನಾನೇನು ಸರಕಲ್ಲ ಎಂದು ಪ್ರತಿಪಾದಿಸಿದ್ದಾರೆ. ಮದುವೆಯಲ್ಲಿ ಕನ್ಯಾದಾನ ಅಲ್ಲ, ಕನ್ಯಾಮಾನ ಆಗಬೇಕಿದೆ ಎಂದು ಕೂಡ ಜಾಹಿರಾತಿನಲ್ಲಿ ಹೇಳಿದ್ದು, ಇದು ಕೆಲವರು ಒಪ್ಪಿಕೊಂಡಿದ್ದು, ಕೆಲವರು ಕಿಡಿಕಾರಿದ್ದಾರೆ.
ಮತ್ತೋರ್ವ ನಟಿ ದಿಯಾ ಮಿರ್ಜಾ ತನ್ನ ಮದುವೆಯಲ್ಲಿ ಕನ್ಯಾದಾನ ಎಂಬ ಶಾಸ್ತ್ರವನ್ನು ಮಾಡಿಸಿಕೊಳ್ಳಲಿಲ್ಲವಂತೆ, ಜೊತೆಗೆ ಮಹಿಳಾ ಪುರೋಹಿತರನ್ನು ಕರೆಸಿದ್ದೆ ಎಂದು ಹೇಳಿದ್ದಾರೆ. ಆದರೆ ನಟಿ ಕಂಗನಾ ರನಾನತ್, ದೊಡ್ಡ ದೊಡ್ಡ ಬ್ರಾಂಡ್ ಗಳ ಜಾಹಿರಾತಿನಲ್ಲಿ ಹಿಂದೂ ಧರ್ಮದ ಶಾಸ್ತ್ರವನ್ನು ಮಾತ್ರ ಯಾಕೆ ತಪ್ಪೆಂದು ಬಿಂಬಿಸುವಂತೆ ತೋರಿಸುತ್ತೀರಾ ಎಂದು ಹರಿಹಾಯ್ದಿದ್ದಾರೆ. ಹೀಗೆ ಇದೊಂದು ಲೆಹಂಗಾ ಜಾಹಿರಾತು ಆಗಿದ್ದರೂ, ಸಮಾಜದ ಹಳೆಯ ಸಂಪ್ರದಾಯದ ಮೇಲೆ ಈಗ ಸಾಕಷ್ಟು ಚರ್ಚೆ ನಡೆಸುತ್ತಿದೆ.