ಮಾಲ್ಡೀವ್ಸ್‌ನ ಸಚಿವ ಅಲಿ ಸೊಲಿಹ್ ಅವರು ಹಾಡಹಗಲೇ ಸಾರ್ವಜನಿಕ ಪ್ರದೇಶದಲ್ಲಿ ವ್ಯಕ್ತಿಯೊಬ್ಬನಿಂದ ಇರಿತಕ್ಕೊಳಗಾದ ಘಟನೆ ನಡೆದಿದೆ. ಸೋಮವಾರ ಮಧ್ಯಾಹ್ನ ರಾಜಧಾನಿ ಮಾಲೆಯ ಉತ್ತರದಲ್ಲಿರುವ ಹುಲ್ಹುಮಲೆಯಲ್ಲಿ ಚಾಕು ಹಿಡಿದು ಬಂದ ವ್ಯಕ್ತಿಯೊಬ್ಬ ಸಚಿವರಿಗೆ ಇರಿದಿದ್ದಾನೆ. ಈ ವೇಳೆ ಅವರ ಎಡಗೈಗೆ ಗಾಯಗಳಾಗಿದ್ದು, ತಪ್ಪಿಸಿಕೊಂಡು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಈ ಹಿಂಸಾತ್ಮಕ ಘಟನೆ ನಡೆದ ಕೂಡಲೇ ದಾಳಿಕೋರನನ್ನು ಬಂಧಿಸಲಾಗಿದೆ. ಸೊಲಿಹ್ ಅವರು ಪರಿಸರ, ಹವಾಮಾನ ಬದಲಾವಣೆ ಮತ್ತು ತಂತ್ರಜ್ಞಾನದ ರಾಜ್ಯ ಸಚಿವರಾಗಿದ್ದಾರೆ. ಅವರು ಅಧ್ಯಕ್ಷ ಇಬ್ರಾಹಿಂ ಸೋಲಿಹ್ ಅವರ ಆಡಳಿತಾರೂಢ ಮಾಲ್ಡೀವಿಯನ್ ಡೆಮಾಕ್ರಟಿಕ್ ಪಾರ್ಟಿಯ ಸಮ್ಮಿಶ್ರ ಪಾಲುದಾರರಾಗಿರುವ ಜುಮ್ಹೂರಿ ಪಕ್ಷದ (ಜೆಪಿ) ವಕ್ತಾರರೂ ಆಗಿದ್ದಾರೆ.
ಸೋಲಿಹ್ ಅವರು ಹುಲ್ಹುಮಲೆಯ ರಸ್ತೆಯೊಂದರಲ್ಲಿ ದ್ವಿಚಕ್ರವಾಹನದಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ಸೋಲಿಹ್ ಅವರ ಕುತ್ತಿಗೆಯ ಮೇಲೆ ಹಿಂದಿನಿಂದ ದಾಳಿ ಮಾಡುವ ಮೊದಲು ದುಷ್ಕರ್ಮಿಯು ಕುರಾನ್‌ನ ಕೆಲವು ಪದ್ಯಗಳನ್ನು ಪಠಿಸಿದ್ದಾನೆ ಎಂದು ಮಾಲ್ಡೀವಿಯನ್ ಮಾಧ್ಯಮ ವರದಿ ಮಾಡಿದೆ. ಕುತ್ತಿಗೆಯ ಮೇಲೆ ಚಾಕು ಇರಿಯಲು ಬಂದಾಗ ಸಚಿವರು ತಪ್ಪಿಸಿಕೊಂಡಿದ್ದಾರೆ. ಈ ವೇಳೆ ಅವರ ಎಡಗೈಗೆ ಗಾಯಗಳಾಗಿವೆ. ಕೂಡಲೇ ತಮ್ಮ ವಾಹನವನ್ನು ಅಲ್ಲೇ ಬಿಟ್ಟು ಅವರು ಅಲ್ಲಿಂದ ಓಡಿಹೋಗಿದ್ದಾರೆ. ಸದ್ಯ, ಸಚಿವರು ಹುಲ್ಹುಮಲೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.