ಆನೆಗಳ ಹಿಂಡೊಂದಕ್ಕೆ ಗುದ್ದುವುದನ್ನು ತಪ್ಪಿಸಲು ತನ್ನೆಲ್ಲಾ ಚಾಲನಾ ಕೌಶಲ್ಯವನ್ನು ಧಾರೆಯೆರೆದು ಸಮಯಪ್ರಜ್ಞೆ ಮೆರೆದ ರೈಲ್ವೇ ಲೋಕೋಪೈಲಟ್ ಒಬ್ಬರು ನೆಟ್ಟಿಗರ ಪ್ರಶಂಸೆಗೆ ಪಾತ್ರರಾಗಿದ್ದಾರೆ.,
ದಿ ನೀಲಗಿರಿ ಮೌಂಟೆನ್ ರೈಲ್ವೇಗೆ ಸೇರಿದ ರೈಲೊಂದು ಮೆಟ್ಟುಪಾಳಯಂನಿಂದ ಶುಕ್ರವಾರ ಬೆಳಿಗ್ಗೆ ಹೊರಟ ಬಳಿಕ ಒಂದಷ್ಟು ದೂರದಲ್ಲಿ ಆನೆಗಳ ಹಿಂಡೊಂದು ಹಳಿ ದಾಟಲು ಮುಂದಾಗಿವೆ. ಬೆಳಿಗ್ಗೆ 7:30ರ ವೇಳೆಗೆ ಮೆಟ್ಟುಪಾಳಯಂನಿಂದ ಹೊರಟಿದ್ದ ಈ ರೈಲಿನಲ್ಲಿ 138 ಜನ ಪ್ರಯಾಣಿಕರಿದ್ದರು. ಇಲ್ಲಿನ ಹಿಲ್ಗ್ರೋವ್ ಮತ್ತು ಅಡರ್ಲಿ ಎಂಬ ಊರುಗಳ ನಡುವೆ ಸಂಚರಿಸುತ್ತಿದ್ದ ಸಂದರ್ಭದಲ್ಲಿ ಐದು ಆನೆಗಳು ಹಾಗೂ ಮರಿಯೊಂದು ಹಳಿ ದಾಟುತ್ತಿರುವುದನ್ನು ಲೋಕೋ ಪೈಲಟ್ ಗಮನಿಸಿದ್ದಾರೆ.
ಬೇಸಿಗೆಯುದ್ದಕ್ಕೂ ನೀರನ್ನು ಅರಸಿಕೊಂಡು ಹಳಿಗಳುದ್ದಕ್ಕೂ ಆನೆಗಳು ಅಡ್ಡಾಡುವುದು ಸಾಮಾನ್ಯ ಸಂಗತಿ. ತಕ್ಷಣ ಬ್ರೇಕ್ ಅಳವಡಿಸಿದ ಲೋಕೋಪೈಲಟ್ ರೈಲನ್ನು ಅರ್ಧ ಗಂಟೆವರೆಗೂ ನಿಲ್ಲಿಸಿದ್ದಾರೆ. ಆನೆಗಳು ಹಳಿಗಳನ್ನು ದಾಟದಂತೆ ನೋಡಿಕೊಳ್ಳಲು ಅರಣ್ಯ ಇಲಾಖೆ ಕ್ರಮಗಳನ್ನು ತೆಗೆದುಕೊಂಡರೂ ಸಹ ಒಮ್ಮೊಮ್ಮೆ ಹೀಗೆ ಆಗುತ್ತಲೇ ಇರುತ್ತದೆ.
ಪ್ರಾಣಿಗಳು ದೊಡ್ಡ ಸಂಖ್ಯೆಯಲ್ಲಿ ಹಳಿ ದಾಟುವ ವಲಯಗಳಲ್ಲಿ ವೇಗ ನಿಯಂತ್ರಣ, ಸೂಚನಾ ಫಲಕಗಳ ಅಳವಡಿಕೆ ಸೇರಿದಂತೆ ಅನೇಕ ಕ್ರಮಗಳನ್ನು 2022ರಿಂದ ತೆಗೆದುಕೊಂಡು ಬರಲಾಗುತ್ತಿದೆ. ಈ ಸಂಬಂಧ ಅರಣ್ಯ ಇಲಾಖೆ ಸಿಬ್ಬಂದಿ ರೈಲ್ವೇ ಇಲಾಖೆಯೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ರೈಲು ಸಂಚಾರದಿಂದ ವನ್ಯಸಂಕುಲಕ್ಕೆ ಯಾವುದೇ ಹಾನಿಯಾಗದಂತೆ ನೋಡಿಕೊಳ್ಳುತ್ತಿದ್ದಾರೆ.