ಬೆಂಗಳೂರು : ವಾಹನ ಸವಾರರೇ ಹುಷಾರ್…ಇನ್ಮುಂದೆ ರಸ್ತೆಗಳಲ್ಲಿ ಟ್ರಾಫಿಕ್ ಜಂಪ್ ಮಾಡಿದ್ರೆ 2-3 ನಿಮಿಷಗಳಲ್ಲಿ ನಿಮ್ಮ ಮೊಬೈಲ್ ಗೆ ದಂಡದ ಎಸ್ ಎಂ ಎಸ್ ಬರುತ್ತದೆ.
ಸಿಗ್ನಲ್ ಜಂಪ್ ಮಾಡಿದರೆ, ಮೊಬೈಲ್ನಲ್ಲಿ ಮಾತನಾಡುತ್ತ ವಾಹನ ಚಲಾಯಿಸಿದ್ರೆ, ಹೆಲ್ಮೆಟ್ ಇಲ್ಲದೆ ಸವಾರಿ ಮಾಡಿದ್ರೆ 2 ನಿಮಿಷದಲ್ಲಿ ವಾಹನ ಸವಾರರ ಮೊಬೈಲ್ಗೆ ದಂಡ ಪಾವತಿಸುವಂತೆ ಸಂದೇಶ ಬರಲಿದೆ.
ರಾಜ್ಯ ರಸ್ತೆ ಸುರಕ್ಷತೆ ಮತ್ತು ಸಂಚಾರ ವಿಭಾಗವು ಈ ನಿಯಮವನ್ನು ಜಾರಿಗೊಳಿಸಿದ್ದು, ನಿಮ್ಮನ್ನು ಅತ್ಯಾಧುನಿಕ ಕ್ಯಾಮೆರಾಗಳು ಕಾಯಲಿದೆ. ನೀವು ಸಂಚಾರಿ ನಿಯಮ ಉಲ್ಲಂಘಿಸಿದ್ರೆ ಕ್ಯಾಮೆರಾ ಎಲ್ಲವನ್ನು ಸೆರೆಹಿಡಿಯಲಿದೆ. ನಂತರ 2-3 ನಿಮಿಷಗಳಲ್ಲಿ ನಿಮ್ಮ ಮೊಬೈಲ್ ಗೆ ಎಸ್ ಎಂಎಸ್ ಬರಲಿದೆ.
ನೋಂದಣಿ ವೇಳೆ ನೀಡಿರುವ ಮೊಬೈಲ್ ಸಂಖ್ಯೆಗೆ ಸಂದೇಶ ರವಾನೆಯಾಗುತ್ತದೆ. ವಾಹನ ಮಾರಾಟ ಮಾಡಿದ್ದರೂ ಸಹ ಸಾರಿಗೆ ಇಲಾಖೆಯಲ್ಲಿ ಖರೀದಿದಾರನ ಮೊಬೈಲ್ ಸಂಖ್ಯೆ ನಮೂದಾ ಗಿದ್ದರೆ ಆತನಿಗೆ ಸಂದೇಶ ರವಾನೆಯಾಗಲಿದೆ. ಈ ಸಂದೇಶದಲ್ಲಿ ಒಂದು ಲಿಂಕ್ ಇರುತ್ತದೆ. ಅದನ್ನು ಕ್ಲಿಕ್ ಮಾಡಿದ್ರೆ ಫೋಟೋ, ದಂಡದ ಮಾಹಿತಿ ಬರುತ್ತದೆ.
ಮೈಸೂರು, ಬೆಳಗಾವಿ, ಬಳ್ಳಾರಿ, ದಾವಣಗೆರೆ, ತುಮಕೂರು ಹಾಗೂ ಶಿವಮೊಗ್ಗದಲ್ಲಿ ಜಾರಿಯಾಗಲಿದ್ದು, ಬೆಂಗಳೂರಿನಲ್ಲಿ ವಾಹನಗಳ ಸಂಖ್ಯೆ ಹೆಚ್ಚಿನ ಪ್ರಮಾಣದಲ್ಲಿರುವುದರಿಂದ ಕ್ಷಣಾರ್ಧದಲ್ಲಿ ಸಂದೇಶ ಕಳುಹಿಸಲು ಕಷ್ಟವಾಗುತ್ತಿದೆ ಎನ್ನಲಾಗಿದೆ. ಸದ್ಯ, ಕ್ಯಾಮೆರಾ ಅಳವಡಿಕೆ ಕಾರ್ಯ ನಡೆಯುತ್ತಿದ್ದು, ನಂತರ ಎಲ್ಲಾ ನಗರಗಳಲ್ಲೂ ಜಾರಿಯಾಗಲಿದೆ ಎನ್ನಲಾಗಿದೆ.