ನಿಮ್ಮ ಮೊಬೈಲ್ ನಲ್ಲಿ ಸೇವ್ ಆಗಿರುವ ನಂಬರ್ ಗಳಿಂದ ಕರೆ ಬಂದರೆ ಯೋಚನೆ ಮಾಡದೇ ತಕ್ಷಣ ಫೋನ್ ಕರೆ ಸ್ವೀಕರಿಸ್ತೀರಾ ಅಲ್ವಾ?. ಆದರೆ ಸೇವ್ ಆಗಿರದ ನಂಬರ್ ಗಳಿದ ಕರೆ ಬಂದಾಗ ಯಾರು ಕರೆ ಮಾಡಿರಬಹುದು ಎಂಬ ಯೋಚನೆಯೊಂದಿಗೆ ಕರೆ ಸ್ವೀಕರಿಸೋದು ಸಾಮಾನ್ಯ. ಆದರೆ ಇತ್ತೀಚೆಗೆ ಫ್ರಾಡ್ ಕರೆಗಳು ಹೆಚ್ಚಾಗಿದ್ದು ಯಾವ ನಂಬರ್ ಗಳಿಂದ ಅಥವಾ ಕೋಡ್ ನಂಬರ್ ಗಳಿಂದ ಬರುವ ಕರೆಗಳನ್ನು ಸ್ವೀಕರಿಸಬಾರದು ಎಂಬ ಬಗ್ಗೆ ಮಾಹಿತಿ ನೀಡಲಾಗ್ತಿರುತ್ತದೆ. ನಿಮಗೇನಾದರೂ +84, +62, ಅಥವಾ +60 ರಿಂದ ಪ್ರಾರಂಭವಾಗುವ ಸಂಖ್ಯೆಗಳಿಂದ ಕರೆಗಳು ಬರುತ್ತಿದ್ದರೆ, ಅವುಗಳನ್ನು ಲಘುವಾಗಿ ತೆಗೆದುಕೊಳ್ಳಬೇಡಿ. ಅಂತಹ ಕರೆಗಳು ನಿಮ್ಮನ್ನು ಬಲೆಗೆ ಬೀಳಿಸಿ ಹಣವನ್ನು ಸುಲಿಗೆ ಮಾಡಬಹುದು. ಈ ಬಗ್ಗೆ ಸರ್ಕಾರ ಹಲವು ಬಾರಿ ಎಚ್ಚರಿಕೆಯನ್ನೂ ನೀಡಿದೆ.
ಕಳೆದ ಕೆಲವು ತಿಂಗಳುಗಳಿಂದ, +84, +62, +60 ರಿಂದ ಪ್ರಾರಂಭವಾಗುವ ವಾಟ್ಸಾಪ್ ಸಂಖ್ಯೆಗಳಿಂದ ಬರುವ ಕರೆಗಳಲ್ಲಿ ಭಾರಿ ಹೆಚ್ಚಳ ಕಂಡುಬಂದಿದೆ. ಮಲೇಷ್ಯಾ, ಕೀನ್ಯಾ, ವಿಯೆಟ್ನಾಂ ಮತ್ತು ಇಥಿಯೋಪಿಯಾದಿಂದ ಇಂತಹ ಕರೆಗಳು ಬರುತ್ತಿವೆ. ಈ ISD ಸಂಖ್ಯೆಗಳಿಂದ ಬರುವ ಕರೆಗಳು ಸಾಮಾನ್ಯವಾಗಿ ವೀಡಿಯೊ ಕರೆಗಳಾಗಿವೆ. ಇವುಗಳಲ್ಲದೆ, ಭಾರತೀಯ ಕೋಡ್‌ಗಳಿರುವ ಸಂಖ್ಯೆಗಳಿಂದ ಬರುವ ಅಪರಿಚಿತ ಕರೆಗಳು ಸಹ ಅಪಾಯಕಾರಿ.
ಈ ಸಂಖ್ಯೆಗಳಿಂದ ವೀಡಿಯೊ ಕರೆಗಳನ್ನು ಮಾಡಲಾಗುತ್ತಿದೆ ಮತ್ತು ನೀವು ಕರೆ ಸ್ವೀಕರಿಸುವ ಮತ್ತು ಏನನ್ನಾದರೂ ಅರ್ಥಮಾಡಿಕೊಳ್ಳುವ ಹೊತ್ತಿಗೆ ಈ ಸೈಬರ್ ದರೋಡೆಕೋರರು ತಮ್ಮ ಕೆಲಸವನ್ನು ಮಾಡಿ ಮುಗಿಸಿರುತ್ತಾರೆ. ಅವರಿಗೆ ನಿಮ್ಮ ಮುಖ ಗೋಚರಿಸುವ ಕೆಲವು ಸೆಕೆಂಡುಗಳ ವೀಡಿಯೊ ಮಾತ್ರ ಬೇಕಾಗುತ್ತದೆ. ಇದರ ನಂತರ ನಿಮ್ಮ ಮುಖವನ್ನು ಅಶ್ಲೀಲ ವೀಡಿಯೊಗಳೊಂದಿಗೆ ಎಡಿಟ್ ಮಾಡಲಾಗುತ್ತದೆ , ನಂತರ ನಿಮ್ಮನ್ನು ಬ್ಲ್ಯಾಕ್ ಮೇಲ್ ಮಾಡುವ ಆಟ ಪ್ರಾರಂಭವಾಗುತ್ತದೆ. ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಮಾಡುವುದಾಗಿ ಬೆದರಿಕೆ ಹಾಕುತ್ತಾರೆ. ಅಪರಿಚಿತ ಸಂಖ್ಯೆಯಿಂದ ಕರೆ ಬಂದರೆ ಅದನ್ನು ಸ್ವೀಕರಿಸಬೇಡಿ ಎಂದು ವಾಟ್ಸಾಪ್ ಈ ರೀತಿಯ ವಂಚನೆಯ ಬಗ್ಗೆ ಹೇಳಿದೆ.
ಇಂತಹ ಕರೆಯನ್ನು ತಿರಸ್ಕರಿಸಿದ ನಂತರ ತಕ್ಷಣವೇ ವರದಿ ಮಾಡಿ ಮತ್ತು ಅಂತಹ ಸಂಖ್ಯೆಗಳನ್ನು ನಿರ್ಬಂಧಿಸಿ. ಇದಲ್ಲದೇ ಇತ್ತೀಚಿನ ದಿನಗಳಲ್ಲಿ ಉದ್ಯೋಗಕ್ಕೆ ಸಂಬಂಧಿಸಿದಂತೆ ಇಂತಹ ಕರೆಗಳು ಬರುತ್ತಿವೆ. ಅಂತಹ ಸಂಖ್ಯೆಗಳನ್ನು ಸಹ ನಿರ್ಬಂಧಿಸಿ. ಇತ್ತೀಚೆಗೆ ವಾಟ್ಸಪ್ ಇದೇ ರೀತಿಯ ಸ್ಪ್ಯಾಮ್‌ಗಾಗಿ 4.7 ಮಿಲಿಯನ್ ಖಾತೆಗಳನ್ನು ನಿರ್ಬಂಧಿಸಿದೆ.