ಬೆಂಗಳೂರು : ಬಸ್ ಸಿಗಲಿಲ್ಲ ಎಂದು ರಾತ್ರಿ ವೇಳೆ ಕಂಡ ಕಂಡ ಕಾರ್ ನಲ್ಲಿ ಡ್ರಾಪ್ ತಗೋತಿರಾ..ನೀವು ಈ ಸುದ್ದಿ ಓದಲೇಬೇಕು. ಹೌದು, ರಾತ್ರಿ ವೇಳೆ ಡ್ರಾಪ್ ಕೊಡುವ ನೆಪದಲ್ಲಿ ಬೆದರಿಸಿ ಹಣ, ಒಡವೆ ದೋಚುವ ಗ್ಯಾಂಗ್ ಒಂದು ಬೆಂಗಳೂರಿನಲ್ಲಿ ಪೊಲೀಸರ ಕೈಗೆ ಸಿಕ್ಕಿ ಹಾಕಿಕೊಂಡಿದೆ. ರಾತ್ರಿ ವೇಳೆ ಬಸ್, ಆಟೋ ಸಿಗಲಿಲ್ಲ ಎಂದು ಸಿಕ್ಕ ಸಿಕ್ಕ ಕಾರು ಅಡ್ಡ ಹಾಕುವ ಮುನ್ನ ಈ ಬಗ್ಗೆ ಎಚ್ಚರ ವಹಿಸಿ.
ಗೊರಗುಂಟೇಪಾಳ್ಯ ಸಿಗ್ನಲ್ ಬಳಿ ಒಂದು ಭಯಾನಕ ಘಟನೆ ನಡೆದಿದ್ದು, ಯಾರೋ ಇಬ್ಬರು ಬಸ್ ಸಿಗಲಿಲ್ಲ ಎಂದು ಕಾರೊಂದನ್ನು ಅಡ್ಡ ಹಾಕಿದ್ದಾರೆ. ಖದೀಮರು ಸಿಕ್ಕಿದ್ದೇ ಚಾನ್ಸ್ ಎಂದು ಡ್ರಾಪ್ ಕೊಡುವುದಾಗಿ ಕಾರಿಗೆ ಹತ್ತಿಸಿಕೊಂಡಿದ್ದಾರೆ. ನಂತರ ಮಾಳಗಾಳದ ನಿರ್ಜನ ಪ್ರದೇಶಕ್ಕೆ ಬಂದ ಖದೀಮರು ಬೆದರಿಕೆಯೊಡ್ಡಿ ಹಣ, ಮೊಬೈಲ್ ಕಸಿದುಕೊಂಡಿದ್ದಾರೆ. ಅಲ್ಲದೇ ಅವರ ಗೂಗಲ್ ಪೇ ಮೂಲಕ ಕೂಡ ಹಣ ಹಾಕಿಸಿಕೊಂಡಿದ್ದಾರೆ.ನಂತರ ಮೊಬೈಲ್ ಕೂಡ ಕಸಿದುಕೊಂಡು ಎಸ್ಕೇಪ್ ಆಗಿದ್ದಾರೆ.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಜ್ಞಾನಭಾರತಿ ಪೊಲೀಸರು ಸಿನಿಮೀಯ ರೀತಿಯಲ್ಲಿ ಕಾರ್ಯಾಚರಣೆ ನಡೆಸಿ ಖದೀಮರನ್ನು ಬಂಧಿಸಿದ್ದಾರೆ. ಬಂಧಿತರನ್ನು ಒಬ್ಬ ಆಟೋ ಡ್ರೈವರ್, ಮತ್ತೊಬ್ಬ ಕ್ಯಾಬ್ ಡ್ರೈವರ್ ಎಂದು ಹೇಳಲಾಗಿದೆ. ಸದ್ಯ ಇಬ್ಬರನ್ನು ವಶಕ್ಕೆ ಪಡೆದುಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.