ಬೆಂಗಳೂರು : ಬೆಂಗಳೂರಲ್ಲಿ ‘ಡೆಂಗ್ಯೂ’ ಭೀತಿ ಮನೆ ಮಾಡಿದ್ದು, ಡೆಂಗ್ಯೂ ನಿಯಂತ್ರಣಕ್ಕೆ ಬಿಬಿಎಂಪಿ ಹರಸಾಹಸ ಪಡುತ್ತಿದೆ.
ಜನರು ಮನೆ ಸುತ್ತ ಸ್ವಚ್ಚತೆ ಕಾಪಾಡದಿದ್ರೆ 50 ರೂ ದಂಡ ವಿಧಿಸಲಾಗುತ್ತದೆ ಎಂದು ಬಿಬಿಎಂಪಿ ಎಚ್ಚರಿಕೆ ನೀಡಿದೆ. ತಮ್ಮ ಮನೆ ಸುತ್ತ ಕ್ಲೀನ್ ಮಾಡದೇ ಸೊಳ್ಳೆಗಳ ಉತ್ಪತ್ತಿಗೆ ಕಾರಣರಾದ್ರೆ ಬಿಬಿಎಂಪಿ 50 ರೂ ದಂಡ ವಿಧಿಸುವ ಎಚ್ಚರಿಕೆ ನೀಡಿದೆ. ಖಾಸಗಿ ಜಾಗ, ಸ್ವತ್ತುಗಳಲ್ಲಿ ಸೊಳ್ಳೆ ಉತ್ಪತ್ತಿ ಕಂಡು ಬಂದರೆ, ಜಾಗ ಕ್ಲೀನ್ ಮಾಡಿಕೊಳ್ಳದಿದ್ರೆ ಬಿಬಿಎಂಪಿ ಸಿಬ್ಬಂದಿ ಬಂದು ದಂಡ ವಿಧಿಸಲಿದ್ದಾರೆ.
ಬೆಂಗಳೂರಿನ ಲಾಲ್ ಬಾಗ್ ಸೇರಿ ಹಲವು ಕಡೆ ಕಸದ ರಾಶಿಗಳು ಬಿದ್ದಿದ್ದು, ಇದರಿಂದ ಸೊಳ್ಳೆಗಳು ಹೆಚ್ಚೆಚ್ಚು ಉತ್ಪತ್ತಿಯಾಗುತ್ತಿದೆ ಎಂದು ಸಾರ್ವಜನಿಕರು ದೂರಿದ್ದಾರೆ.
ಮಹಾಮಾರಿ ಡೆಂಗ್ಯೂ ರೋಗವನ್ನು ನಿಯಂತ್ರಿಸಲು ಸಾರ್ವಜನಿಕರು ತಮ್ಮ ಮನೆಯ ಒಳಾಂಗಣ ಮತ್ತು ಹೊರಾಂಗಣ ಪ್ರದೇಶಗಳಲ್ಲಿ ನೀರು ಸಂಗ್ರಹಣೆಯಾಗದಂತೆ ನೋಡಿಕೊಳ್ಳಬೇಕು . ಈಡೀಸ್ ಈಜಿಪ್ಟೈ ಸೊಳ್ಳೆ ಕಡಿತದಿಂದ ಡೆಂಗಿ ಜ್ವರ ಹರಡಲಿದ್ದು, ಸಾಮಾನ್ಯವಾಗಿ ಹಗಲು ಹೊತ್ತಿನಲ್ಲಿ ಅವು ಕಚ್ಚುತ್ತವೆ. ಜನ ಸಾಮಾನ್ಯರು 5-6 ದಿನಗಳಿಗೊಮ್ಮೆ ಶೇಖರಣೆ ಮಾಡಿಕೊಂಡ ನೀರಿನ ತೊಟ್ಟಿ, ಡ್ರಮ್, ಬ್ಯಾರೆಲ್ ಇತರೆ ನೀರಿನ ಸಂಗ್ರಹಾರಗಳನ್ನು ಸ್ವಚ್ಛಗೊಳಿಸಿಕೊಳ್ಳಬೇಕು. ಮುಂಗಾರಿನಲ್ಲಿ ಸಾರ್ವಜನಿಕರು ಮನೆಯ ಸುತ್ತಮುತ್ತಲಿನ ಘನತ್ಯಾಜ್ಯ ವಸ್ತುಗಳಲ್ಲಿ ಸಂಗ್ರಹವಾಗುವ ಮಳೆ ನೀರಿನಲ್ಲಿ ಈಡೀಸ್ ಸೊಳ್ಳೆ ಉತ್ಪತ್ತಿಯಾಗದಂತೆ ತಡೆಗಟ್ಟುವಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಸರ್ಕಾರ ಮನವಿ ಮಾಡಿದೆ.