ಮದ್ಯಪಾನ ಪ್ರಿಯರಿಗೆ ಶಾಕ್ ನೀಡುವಂತಹ ವಿಚಾರವೊಂದು ಅಧ್ಯಯನದಲ್ಲಿ ಬಯಲಾಗಿದೆ. ಮದ್ಯ ಹಾಗೂ ಕ್ಯಾನ್ಸರ್ ನಡುವೆ ಸಂಪರ್ಕ ಹೊಂದಿರುವ ಅಧ್ಯಯನದ ಬಗ್ಗೆ ವೈದ್ಯರು ಜಗತ್ತಿಗೆ ಮಾಹಿತಿ ಸಾರಿದ್ದಾರೆ. ಈ ಅಧ್ಯಯನದ ಪ್ರಕಾರ 2020ರಲ್ಲಿ ಮದ್ಯಪಾನ ಸೇವನೆಯಿಂದ 7.5 ಲಕ್ಷಕ್ಕೂ ಅಧಿಕ ಮಂದಿ ಕ್ಯಾನ್ಸರ್ನಿಂದ ಬಳಲಿದ್ದಾರೆ ಎಂದು ತಿಳಿದುಬಂದಿದೆ..!
ಲ್ಯಾಸೆಂಟ್ ಆಲ್ಕೋಲಾಜಿ ಎಡಿಷನ್ನಲ್ಲಿ 13 ಜುಲೈನಲ್ಲಿ ಪ್ರಕಟಿಸಲಾದ ಅಧ್ಯಯನದ ವರದಿಯಲ್ಲಿ 2020ರಲ್ಲಿ ವರದಿಯಾದ ಕ್ಯಾನ್ಸರ್ ಪ್ರಕರಣಗಳಲ್ಲಿ 4 ಪ್ರತಿಶತ ಕ್ಯಾನ್ಸರ್ ಪ್ರಕರಣಗಳು ಮದ್ಯಪಾನದೊಂದಿಗೆ ಸಂಪರ್ಕ ಹೊಂದಿದೆ. ಮದ್ಯಪಾನಕ್ಕೆ ಸಂಬಂಧಿಸಿದ ಕ್ಯಾನ್ಸರ್ ಲಕ್ಷಣವು ದಿನಕ್ಕೆ 2ಕ್ಕಿಂತ ಹೆಚ್ಚು ಬಾರಿ ಸೇವನೆ ಮಾಡುವವರಲ್ಲಿ ಕಂಡು ಬಂದಿದೆ ಎನ್ನಲಾಗಿದೆ.
ನಾರ್ಥ್ ವೆಸ್ಟರ್ನ್ ಮೆಡಿಸಿನ್ನಲ್ಲಿ ಥೋರೋಸಿಕ್ ಸರ್ಜನ್ ಡೇವಿಡ್ ಓಡೆಲ್ ನೀಡಿರುವ ಮಾಹಿತಿಯ ಪ್ರಕಾರ ಮದ್ಯಪಾನ ಸೇವನೆಯಿಂದಾಗಿ ನಮ್ಮ ಗಂಟಲು ಹಾಗೂ ಹೊಟ್ಟೆಯ ಒಳ ಪದರಗಳ ಮೇಲೆ ಗಂಭೀರ ಪರಣಾಮ ಬೀರುತ್ತದೆ. ನಮ್ಮ ದೇಹವು ಈ ಸಮಸ್ಯೆಯನ್ನು ಹೋಗಲಾಡಿಸಲು ಆದಷ್ಟು ಹೋರಾಡುತ್ತದೆ. ಆದರೆ ಕೆಲವೊಂದು ಬಾರಿ ಇದು ಕ್ಯಾನ್ಸರ್ಗೆ ತಿರುಗುವ ಸಾಧ್ಯತೆ ಇದೆ. ಮದ್ಯಪಾನ ಸಂಬಂಧಿ ಕ್ಯಾನ್ಸರ್ ರೋಗವು ಹೆಚ್ಚಿನ ಪ್ರಮಾಣದಲ್ಲಿ ಅಂದರೆ 75 ಪ್ರತಿಶತ ಪುರುಷರಲ್ಲೇ ಕಂಡು ಬಂದಿದೆ. ಹೆಚ್ಚಿನ ಪ್ರಕರಣಗಳಲ್ಲಿ ಈ ಕ್ಯಾನ್ಸರ್ ಲಿವರ್ ಹಾಗೂ ಅನ್ನನಾಳದಲ್ಲಿ ಕಂಡು ಬಂದಿದೆ. ಮಹಿಳೆಯರಲ್ಲಿ ಸ್ಥನ ಕ್ಯಾನ್ಸರ್ ಹೆಚ್ಚಾಗಿ ಕಂಡು ಬರುತ್ತದೆ.
ಕಳೆದ ವರ್ಷ ಮದ್ಯಪಾನ ಸಂಬಂಧ ನಡೆಸಲಾದ ಅಧ್ಯಯನದಲ್ಲಿ ತಿಳಿದುಬಂದ ಇನ್ನೊಂದು ಆಘಾತಕಾರಿ ವಿಚಾರ ಏನಂದ್ರೆ ಕೊರೊನಾ ಸಾಂಕ್ರಾಮಿಕದಿಂದಾಗಿ ಮನೆಯಲ್ಲೇ ಹೆಚ್ಚು ಕಾಲ ಇರಬೇಕಾದ ಅನಿವಾರ್ಯತೆ ಇರೋದ್ರಿಂದ ಮದ್ಯಪಾನ ಸೇವನೆಯ ಪ್ರಮಾಣ ಅಧಿಕವಾಗಿದೆ ಎಂದು ತಿಳಿದು ಬಂದಿತ್ತು. ಇದೀಗ ಮದ್ಯಪಾನದಿಂದ ಕ್ಯಾನ್ಸರ್ ಪ್ರಮಾಣ ಹೆಚ್ಚಾಗುತ್ತಿದೆ ಎಂಬ ಆಘಾತಕಾರಿ ವಿಚಾರವು ಕಳವಳ ಹೆಚ್ಚಿಸಿದೆ.