ಆಲ್ಕೋಹಾಲ್ ಆರೋಗ್ಯಕ್ಕೆ ಹಾನಿಕರ. ಈ ವಿಷ್ಯ ತಿಳಿದಿದ್ದರೂ ಅನೇಕರು ಮಿತಿಮೀರಿ ಆಲ್ಕೋಹಾಲ್ ಸೇವನೆ ಮಾಡ್ತಾರೆ. ಆಲ್ಕೋಹಾಲ್ ನಮ್ಮ ದೇಹ ಹಾಗೂ ಮನಸ್ಸು ಎರಡರ ಮೇಲೂ ಪರಿಣಾಮ ಬೀರುತ್ತದೆ.
ಒಬ್ಬ ವ್ಯಕ್ತಿಯು ಆಲ್ಕೊಹಾಲ್ ಕುಡಿದ ತಕ್ಷಣ, ಆಲ್ಕೋಹಾಲ್ ಮೊದಲು ಅವನ ಹೊಟ್ಟೆಗೆ ಹೋಗುತ್ತದೆ. ಇದು ವ್ಯಕ್ತಿಯ ಹೊಟ್ಟೆಯಲ್ಲಿ ಗ್ಯಾಸ್ಟ್ರಿಕ್ ಆಮ್ಲವನ್ನುಂಟು ಮಾಡುತ್ತದೆ. ಇದರಿಂದ ಹೊಟ್ಟೆಯ ಒಳ ಪದರದಲ್ಲಿ ಉರಿಯೂತ ಉಂಟಾಗುತ್ತದೆ. ಇದರ ನಂತರ ಆಲ್ಕೋಹಾಲ್ ಯಕೃತ್ತನ್ನು ತಲುಪುತ್ತದೆ. ಇದರಿಂದಾಗಿ ವ್ಯಕ್ತಿಯ ಯಕೃತ್ತು ದುರ್ಬಲಗೊಳ್ಳಲು ಪ್ರಾರಂಭವಾಗುತ್ತದೆ. ಯಕೃತ್ತಿನಲ್ಲಿ ಯಾವುದೇ ನೋವು ಕಾಣಿಸುವುದಿಲ್ಲ. ಹಾಗಾಗಿ ಯಕೃತ್ತು ಕೆಟ್ಟಿದೆ ಎನ್ನುವ ಸಂಗತಿ ತಿಳಿಯುವುದಿಲ್ಲ.
ಯಕೃತ್ತಿನಿಂದ ಮೆದುಳಿಗೆ ತಲುಪುತ್ತದೆ. ಡಿಚೆ ವೇಲ್ ಅವರ ವರದಿಯ ಪ್ರಕಾರ, ಈ ಆಲ್ಕೋಹಾಲ್ ಮೆದುಳಿನ ಕೇಂದ್ರ ನರಮಂಡಲದ ಮೇಲೆ ಪರಿಣಾಮ ಬೀರುತ್ತದೆ. ಮೆದುಳಿನ ನ್ಯೂರಾನ್ ಗಳು ಪರಸ್ಪರ ಸಂವಹನ ನಡೆಸುತ್ತವೆ. ಆಲ್ಕೋಹಾಲ್ ಪರಿಣಾಮದಿಂದಾಗಿ ಮನುಷ್ಯನ ನರಮಂಡಲವು ಬಹಳ ನಿಧಾನವಾಗಿ ಕೆಲಸ ಮಾಡಲು ಪ್ರಾರಂಭಿಸುತ್ತದೆ. ಕ್ರಮೇಣ ವ್ಯಕ್ತಿಯು ತನ್ನ ಮೇಲೆ ನಿಯಂತ್ರಣವನ್ನು ಕಳೆದುಕೊಳ್ಳುತ್ತಾನೆ. ಮದ್ಯದ ಅಮಲಿನಲ್ಲಿ ವ್ಯಕ್ತಿ ತನ್ನ ಕಾಲುಗಳ ಮೇಲೆ ನಿಲ್ಲಲು ಸಾಧ್ಯವಾಗದಿರುವುದು ಇದೇ ಕಾರಣಕ್ಕೆ.
ವ್ಯಕ್ತಿಯ ರಕ್ತದಲ್ಲಿ ಆಲ್ಕೋಹಾಲ್ ಬೆರೆತು ಹೋಗುವುದರಿಂದ ಅದು ಹೃದಯ ಮತ್ತು ದೇಹದ ಇತರ ಭಾಗಗಳನ್ನು ತಲುಪುತ್ತದೆ. ಹೃದಯ ಬಡಿತ ಹೆಚ್ಚಾಗುತ್ತದೆ. ಅತಿಯಾದ ಆಲ್ಕೊಹಾಲ್ ಸೇವನೆಯಿಂದಾಗಿ ಉತ್ಸಾಹದ ಕೊರತೆ ಮತ್ತು ಲೈಂಗಿಕ ಸಮಸ್ಯೆಗಳು ಕಂಡುಬರುತ್ತವೆ. ಕ್ಯಾನ್ಸರ್, ಶ್ವಾಸಕೋಶದಲ್ಲಿ ಸೋಂಕು ಹೆಚ್ಚಾಗುವ ಅಪಾಯವಿದೆ.