ಬೆಂಗಳೂರು: ದಂಡ ಪಾವತಿಸಿಕೊಂಡು ಅಕ್ರಮ-ಸಕ್ರಮ ಯೋಜನೆ ಶೀಘ್ರ ಜಾರಿಗೆ ಸರ್ಕಾರ ನಿರ್ಧಾರ ಕೈಗೊಂಡಿದ್ದು, ಇನ್ನೊಂದು ವಾರದಲ್ಲಿ ಸುಪ್ರೀಂ ಕೋರ್ಟ್ ಗೆ ಅಫಿಡವಿಟ್ ಸಲ್ಲಿಕೆ ಮಾಡಲಾಗುತ್ತದೆ.
ರಾಜ್ಯದಲ್ಲಿ ಕಂದಾಯ ನಿವೇಶನದಲ್ಲಿ ಅಕ್ರಮವಾಗಿ ನಿರ್ಮಾಣವಾದ ಮನೆ ಸೇರಿದಂತೆ ಎಲ್ಲಾ ಕಟ್ಟಡಗಳನ್ನು ಸಕ್ರಮಗೊಳಿಸುವ ಯೋಜನೆಗೆ ಜಾರಿಗೆ ಸರ್ಕಾರ ಮುಂದಾಗಿದೆ. ಸುಪ್ರೀಂಕೋರ್ಟ್ ಗೆ ಈ ಕುರಿತಾಗಿ ಅಫಿಡವಿಟ್ ಸಲ್ಲಿಕೆ ಮಾಡಲಾಗುತ್ತದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಸಭೆಯಲ್ಲಿ ಈ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿದೆ.
ಸಭೆ ಬಳಿಕ ಈ ಕುರಿತಾಗಿ ಸುದ್ದಿಗಾರರಿಗೆ ಮಾಹಿತಿ ನೀಡಿದ ಕಂದಾಯ ಸಚಿವ ಆರ್. ಅಶೋಕ್, ಬೆಂಗಳೂರು ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಕಂದಾಯ ನಿವೇಶನದಲ್ಲಿ ಅಕ್ರಮವಾಗಿ ನಿರ್ಮಾಣವಾಗಿರುವ ಕಟ್ಟಡಗಳ ಸಕ್ರಮಕ್ಕೆ ಸರ್ಕಾರ ಯೋಜನೆ ಜಾರಿಗೆ ತಂದಿದ್ದು, ಸುಪ್ರೀಂ ಕೋರ್ಟ್ ನಲ್ಲಿ ತಡೆಯಾಜ್ಞೆ ಇದೆ. ತಡೆಯಾಜ್ಞೆ ತೆರವಿಗೆ ಅಫಿಡವಿಡ್ ಸಲ್ಲಿಸಲಾಗುವುದು ಎಂದು ತಿಳಿಸಿದ್ದಾರೆ.
ದಂಡ ಪಾವತಿಸಿಕೊಂಡು ಅಕ್ರಮ ಕಟ್ಟಡಗಳನ್ನು ಸಕ್ರಮಗೊಳಿಸುವ ಜೊತೆಗೆ ಖಾತಾ ನೋಂದಣಿ ಮಾಡಲಾಗುವುದು. ಎಲ್ಲ ಮೂಲ ಸೌಕರ್ಯ ಒದಗಿಸಲಾಗುವುದು. ಇದರಿಂದ ನಿವೇಶನದಾರರಿಗೆ ಬ್ಯಾಂಕುಗಳಲ್ಲಿ ಸಾಲ ಸೌಲಭ್ಯ ಕೂಡ ದೊರೆಯಲಿದೆ ಎಂದು ಹೇಳಿದ್ದಾರೆ.