ಬೆಂಗಳೂರು: ರಾಜ್ಯಾದ್ಯಂತ ಶೀಘ್ರವೇ ಅಕ್ರಮ -ಸಕ್ರಮ ಜಾರಿಗೊಳಿಸಲಾಗುವುದು ಎಂದು ಕಂದಾಯ ಸಚಿವ ಆರ್. ಅಶೋಕ್ ತಿಳಿಸಿದ್ದಾರೆ.
ರಾಜ್ಯಾದ್ಯಂತ ಕಂದಾಯ ಜಾಗದಲ್ಲಿ ಬಡವರು ನಿರ್ಮಿಸಿಕೊಂಡ ಮನೆಗಳನ್ನು ಸಕ್ರಮಗೊಳಿಸಲಾಗುವುದು. ವಾಣಿಜ್ಯ ಉದ್ದೇಶಕ್ಕೆ ಅಕ್ರಮವಾಗಿ ನಿರ್ಮಿಸಿದ ಕಟ್ಟಡಗಳನ್ನು ಸಕ್ರಮಗೊಳಿಸುವುದಿಲ್ಲ ಎಂದರು.
ಅಕ್ರಮ -ಸಕ್ರಮಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನಲ್ಲಿರುವ ಮೊಕದ್ದಮೆ ಹಿಂಪಡೆಯಲು ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಸಮ್ಮತಿಸಿದ್ದಾರೆ. ಶ್ರೀಮಂತರು ಮತ್ತು ವಾಣಿಜ್ಯ ಉದ್ದೇಶಕ್ಕೆ ನಿರ್ಮಿಸಿದ ಕಟ್ಟಡಗಳನ್ನು ಸಕ್ರಮ ಮಾಡಲು ಅವರು ಒಪ್ಪಿಲ್ಲ. ಆದರೆ ಬಡವರ ಮನೆ ಸಕ್ರಮಗೊಳಿಸಲು ವಿರೋಧವಿಲ್ಲ ಎಂದು ಹೇಳಿದ್ದಾರೆ.
ಸರ್ಕಾರ ಮತ್ತು ಅರ್ಜಿದಾರರಿಂದ ಸುಪ್ರೀಂ ಕೋರ್ಟ್ ತಡೆಯಾಜ್ಞೆ ಮಾಡಿಸಿ ಅಕ್ರಮ -ಸಕ್ರಮ ಯೋಜನೆ ಜಾರಿಗೊಳಿಸಲಾಗುವುದು. ದಂಡ ಶುಲ್ಕದೊಂದಿಗೆ ಅಕ್ರಮ ಸಕ್ರಮ ಕಾಯ್ದೆ ಜಾರಿಗೆ ತರಲಾಗುತ್ತದೆ. 60*40 ಅಳತೆಯೊಳಗಿನ ನಿವೇಶನದಲ್ಲಿ ನಿರ್ಮಾಣವಾದ ಮನೆಗಳಿಗೆ ಮಾತ್ರ ಸಕ್ರಮ ಮಾಡಲಾಗುವುದು. ದೊಡ್ಡ ನಿವೇಶನದಲ್ಲಿ ಕಟ್ಟಿದ ಮನೆಗಳನ್ನು ಸಕ್ರಮ ಮಾಡುವುದಿಲ್ಲ. ಕಾಯ್ದೆ ಜಾರಿಯಾದ ನಂತರ ಎಲ್ಲವೂ ಎ ಖಾತೆಗಳಾಗಿರುತ್ತವೆ. ರಾಜ್ಯದಲ್ಲಿ ಸುಮಾರು 12 ಲಕ್ಷ ಅಕ್ರಮ ಮನೆಗಳಿರಬಹುದೆಂದು ಅಂದಾಜಿಸಿದ್ದು, ಇದರಿಂದ ಸರ್ಕಾರಕ್ಕೆ ಸುಮಾರು 20 ಸಾವಿರ ಕೋಟಿ ರೂಪಾಯಿ ಆದಾಯ ಬರುವ ಅಂದಾಜಿದೆ ಎಂದು ಹೇಳಿದರು.