ಬೆಂಗಳೂರು: ಗ್ರಾಮೀಣ ಭಾಗದಲ್ಲಿಯೂ ಅಕ್ರಮ-ಸಕ್ರಮ ಯೋಜನೆ ಜಾರಿಗೆ ರಾಜ್ಯ ಸರ್ಕಾರ ಚಿಂತನೆ ನಡೆಸಿದೆ. ಗ್ರಾಮಾಂತರ ಮತ್ತು ಪಟ್ಟಣ ಪ್ರದೇಶಗಳಲ್ಲಿನ ಅಕ್ರಮ ಆಸ್ತಿಗಳನ್ನು ದಂಡ ಹಾಗೂ ಶುಲ್ಕ ಪಾವತಿಸಿಕೊಂಡು ಸಕ್ರಮಗೊಳಿಸುವ ಚಿಂತನೆ ನಡೆದಿದೆ.
ಪಟ್ಟಣ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಅಕ್ರಮ-ಸಕ್ರಮ ಯೋಜನೆ ವಿಸ್ತರಿಸುವ ಕುರಿತು ಚಿಂತನೆ ನಡೆದಿದೆ. ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಸಂಪುಟ ಸಭೆಯಲ್ಲಿ ಈ ವಿಷಯದ ಬಗ್ಗೆ ಚರ್ಚೆ ನಡೆದಿದೆ ಎಂದು ಹೇಳಲಾಗಿದೆ.
ಗ್ರಾಮ ಠಾಣಾ, ಸ್ಥಳೀಯ ಯೋಜನೆ ವ್ಯಾಪ್ತಿ ಹೊರಗಿರುವ ಅಕ್ರಮ ಸ್ವತ್ತುಗಳು, ಖಾಸಗಿ ಜಮೀನಿನಲ್ಲಿ ನಿವೇಶನಗಳು, ಪರಿವರ್ತನೆ ಆದೇಶ ಅನುಮೋದನೆ ಇಲ್ಲದ ಬಡಾವಣೆಗಳ ಕಟ್ಟಡಗಳು ಸೇರಿದಂತೆ ವಿವಿಧ ಅಕ್ರಮ ಕಟ್ಟಡಗಳನ್ನು ದಂಡ ಪಾವತಿಸಿಕೊಂಡು ಸಕ್ರಮಗೊಳಿಸುವ ಕುರಿತು ಸರ್ಕಾರ ಚಿಂತನೆ ನಡೆಸಿದೆ. ಇದರಿಂದ ಸರ್ಕಾರಕ್ಕೆ ಆದಾಯ ಕೂಡ ಬರಲಿದೆ ಎಂದು ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಗಿದೆ.
ಅಕ್ರಮ ಕಟ್ಟಡಗಳನ್ನು ಸಕ್ರಮಗೊಳಿಸುವುರಿಂದ ಸರ್ಕಾರಕ್ಕೆ ಆದಾಯ ಬರುತ್ತದೆ. ಸ್ವತ್ತುಗಳು ಇ –ಸ್ವತ್ತು ವ್ಯಾಪ್ತಿಗೆ ಬರಲಿದೆ. ಇದರಿಂದ ಗ್ರಾಮದ ಸ್ವತ್ತು ದತ್ತಾಂಶ ರಚಿಸಲು ಅನುಕೂಲವಾಗುತ್ತದೆ. ಅಲ್ಲದೆ, ನೋಂದಣಿ, ಬ್ಯಾಂಕ್ ಸಾಲ ಪಡೆಯಲು, ತೆರಿಗೆ ಸಂಗ್ರಹಕ್ಕೆ ಅವಕಾಶವಾಗಲಿದೆ ಎನ್ನಲಾಗಿದೆ.