ಬೆಂಗಳೂರು: ನಿಯಮ ಉಲ್ಲಂಘಿಸಿ ಕಟ್ಟಡ ನಿರ್ಮಿಸಿದವರಿಗೆ ಸಿಹಿ ಸುದ್ದಿ ಇಲ್ಲಿದೆ. ಅಕ್ರಮ ಕಟ್ಟಡಗಳ ಸಕ್ರಮಕ್ಕೆ ಕಾಯುತ್ತಿರುವ ಮನೆ ಕಟ್ಟಡಗಳ ಮಾಲೀಕರಿಗೆ ಅನುಕೂಲವಾಗುವಂತೆ ಪರ್ಯಾಯ ಮಾರ್ಗಗಳನ್ನು ಸರ್ಕಾರ ಹುಡುಕುತ್ತಿದೆ.
ಮುಂದಿನ ಚುನಾವಣೆ ಹಾಗೂ ಬಿಬಿಎಂಪಿ ಚುನಾವಣೆ ಗಮನದಲ್ಲಿಟ್ಟುಕೊಂಡು ಅಕ್ರಮ ಸಕ್ರಮ ಜಾರಿಗೊಳಿಸಲು ಸರ್ಕಾರ ಮುಂದಾಗಿದೆ. ಸಂಘ ಸಂಸ್ಥೆಗಳು ನ್ಯಾಯಾಲಯದ ಮೆಟ್ಟಿಲು ಹತ್ತಿದ್ದು, ಮೊಕದ್ದಮೆ ಹಿಂಪಡೆಯಲು ಮನವೊಲಿಸುವ ಕಾರ್ಯ ನಡೆದಿದೆ.
ನ್ಯಾಯಾಲಯದ ತಡೆಯಾಜ್ಞೆ ತೆರವಾದರೆ ಬಿಬಿಎಂಪಿ ಮತ್ತು ಪೌರಾಡಳಿತ ಕಾಯ್ದೆಗಳಿಗೆ ತಿದ್ದುಪಡಿ ಮಾಡಿ ನಿಯಮ ರೂಪಿಸಿಸಲಾಗುವುದು. ದಂಡದ ಬದಲು ಸುಧಾರಣೆ ವೆಚ್ಚ ಪಡೆಯಲಿದ್ದು, ಬಡವರು ಮತ್ತು ಮಧ್ಯಮ ವರ್ಗದವರಿಗೆ ಅಕ್ರಮ ಕಟ್ಟಡಗಳ ಸಕ್ರಮ ಮಾಡಿಕೊಡುವ ಬಗ್ಗೆ ಚರ್ಚೆ ನಡೆದಿದೆ.
20X 30 ಅಳತೆ ನಿವೇಶನದಲ್ಲಿ ಮನೆ ನಿರ್ಮಿಸಿಕೊಂಡಿದ್ದರೆ ಬಡವರೆಂದು, 30X40 ರಿಂದ 60X40 ರವರೆಗೆ ಮನೆಯಿದ್ದರೆ ಮಧ್ಯಮ ವರ್ಗ, 40X60 ಹಾಗೂ ಅದಕ್ಕಿಂತ ಹೆಚ್ಚಿನ ನಿವೇಶನದ ಮನೆ ಇದ್ದರೆ ಶ್ರೀಮಂತರು ಎಂದು ಪರಿಗಣಿಸಲಾಗುವುದು. 20010 ರಿಂದಲೂ ರಾಜ್ಯದಲ್ಲಿ ಅಕ್ರಮ ಸಕ್ರಮ ಜಾರಿಗೊಳಿಸುವ ಬಗ್ಗೆ ಕ್ರಮ ಕೈಗೊಂಡಿದ್ದು, ಸುಪ್ರೀಂಕೋರ್ಟ್ ಮುಂದೆ ಕಾಯ್ದೆ ಇದೆ. ಸುಪ್ರೀಂ ಕೋರ್ಟ್ ತಡೆಯಾಜ್ಞೆ ತೆರವುಗೊಳಿಸಿ ಪ್ರಕರಣ ಹಿಂದಕ್ಕೆ ಪಡೆಯುವುದೇ ಹೀಗಿರುವ ದಾರಿ ಎಂದು ಹೇಳಲಾಗಿದೆ.