ಬೆಂಗಳೂರು: ಮಾಜಿ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಇಂದು ಬಿಎಸ್ಪಿ ತೊರೆದು ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ.
ರಾಜ್ಯ ಬಿಜೆಪಿ ಕಚೇರಿಯಲ್ಲಿ ನಡೆಯುವ ಸಮಾರಂಭದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸಮ್ಮುಖದಲ್ಲಿ ಅಖಂಡ ಶ್ರೀನಿವಾಸಮೂರ್ತಿ ಬಿಜೆಪಿ ಸೇರಲಿದ್ದಾರೆ. ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಬಿಜೆಪಿ ಚುನಾವಣಾ ನಿರ್ವಹಣಾ ಸಮಿತಿ ಸಂಚಾಲಕ ವಿ. ಸುನಿಲ್ ಕುಮಾರ್ ಈ ಸಂದರ್ಭದಲ್ಲಿ ಉಪಸ್ಥಿತರಿರುವರು.
2018ರ ವಿಧಾನಸಭೆ ಚುನಾವಣೆಯಲ್ಲಿ ಪುಲಿಕೇಶಿ ನಗರ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಅಖಂಡ ಶ್ರೀನಿವಾಸಮೂರ್ತಿ ದಾಖಲೆಯ ಅಂತರದೊಂದಿಗೆ ಜಯಗಳಿಸಿದ್ದರು. ಕೆಜಿ ಹಳ್ಳಿ, ಡಿಜೆ ಹಳ್ಳಿ ಗಲಭೆಯ ಸಂದರ್ಭದಲ್ಲಿ ಶ್ರೀನಿವಾಸಮೂರ್ತಿ ಅವರ ನಿವಾಸಕ್ಕೆ ದುಷ್ಕರ್ಮಿಗಳು ಬೆಂಕಿ ಹಚ್ಚಿ ದಾಂದಲೆ ನಡೆಸಿದ್ದರು. ಇದಕ್ಕೆ ಕುಮ್ಮಕ್ಕು ನೀಡಿದ ಆರೋಪದಡಿ ಮಾಜಿ ಮೇಯರ್ ಸಂಪತ್ ರಾಜ್ ಬಂಧಿಸಲಾಗಿತ್ತು. ಕಳೆದ ಚುನಾವಣೆಯಲ್ಲಿ ಅಖಂಡ ಶ್ರೀನಿವಾಸಮೂರ್ತಿ ಅವರಿಗೆ ಕಾಂಗ್ರೆಸ್ ಟಿಕೆಟ್ ದೊರೆತಿರಲಿಲ್ಲ. ಹೀಗಾಗಿ ಬಿಎಸ್ಪಿಯಿಂದ ಸ್ಪರ್ಧಿಸಿದ್ದ ಅವರು ಸೋಲು ಕಂಡಿದ್ದರು.