ಪ್ರವಾದಿ ಮಹಮ್ಮದ್ ಪೈಗಂಬರ್ ಅವರ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ್ದ ಬಿಜೆಪಿ ಮಾಜಿ ವಕ್ತಾರೆ ನೂಪುರ್ ಶರ್ಮ ಅವರ ತಲೆ ಕತ್ತರಿಸಿ ತಂದವರಿಗೆ ತಮ್ಮ ಮನೆಯನ್ನು ಉಡುಗೊರೆಯಾಗಿ ನೀಡುತ್ತೇನೆ ಎಂದು ಪ್ರಚೋದನಾಕಾರಿಯಾಗಿ ಮಾತನಾಡಿದ್ದ ಅಜ್ಮೀರ್ ದರ್ಗಾದ ಮೌಲ್ವಿ ಸಲ್ಮಾನ್ ಚಿಸ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಸಲ್ಮಾನ್ ಚಿಸ್ತಿ ಈ ರೀತಿ ಹೇಳಿಕೆ ನೀಡಿ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದರು. ಅಲ್ಲದೆ ಪ್ರವಾದಿ ಮಹಮ್ಮದ್ ರನ್ನು ಅವಮಾನಿಸಿದ್ದಕ್ಕಾಗಿ ನೂಪುರ್ ಶರ್ಮಾ ಅವರನ್ನು ಗುಂಡಿಟ್ಟು ಸಾಯಿಸಬೇಕಿತ್ತು ಎಂದು ಹೇಳಿದ್ದರು.
ಮೌಲ್ವಿ ನೀಡಿದ ಪ್ರಚೋದನಕಾರಿ ಹೇಳಿಕೆ ಕುರಿತಂತೆ ಪ್ರಕರಣ ದಾಖಲಿಸಿಕೊಂಡಿದ್ದ ರಾಜಸ್ಥಾನ ಪೊಲೀಸರು ಇದೀಗ ಸಲ್ಮಾನ್ ಚಿಸ್ತಿಯನ್ನು ಬಂಧಿಸಿದ್ದು, ನ್ಯಾಯಾಲಯದ ಮುಂದೆ ಹಾಜರುಪಡಿಸಲಿದ್ದಾರೆ.