ಮುಂಬೈ: ತಮ್ಮ ಬಣವನ್ನು ‘ನೈಜ’ ರಾಷ್ಟ್ರೀಯತಾವಾದಿ ಕಾಂಗ್ರೆಸ್ ಪಕ್ಷ(ಎನ್ಸಿಪಿ) ಎಂದು ಗುರುತಿಸಿದ ಚುನಾವಣಾ ಆಯೋಗದ ನಿರ್ಧಾರವನ್ನು ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ಸ್ವಾಗತಿಸಿದ್ದಾರೆ.
ಚುನಾವಣಾ ಆಯೋಗವು ನಮ್ಮ ವಕೀಲರ ವಾದವನ್ನು ಆಲಿಸಿದ ನಂತರ ನಮ್ಮ ಪರವಾಗಿ ತೀರ್ಪು ನೀಡಿದೆ. ನಾವು ಇದನ್ನು ನಮ್ರತೆಯಿಂದ ಸ್ವಾಗತಿಸುತ್ತೇವೆ ಎಂದು ತೀರ್ಪಿನ ನಂತರ ಅಜಿತ್ ಪವಾರ್ ಹೇಳಿದ್ದಾರೆ.
ಅಜಿತ್ ಪವಾರ್ ಬಣವನ್ನು ನಿಜವಾದ ಎನ್ಸಿಪಿ ಎಂದು ಘೋಷಿಸುವ ಚುನಾವಣಾ ಆಯೋಗದ ನಿರ್ಧಾರವನ್ನು “ಪ್ರಜಾಪ್ರಭುತ್ವದ ಕೊಲೆ” ಎಂದು ಶರದ್ ಪವಾರ್ ಬಣ ಬಣ್ಣಿಸಿದೆ.
ಎನ್ಸಿಪಿ ಸಂಸದೆ ಸುಪ್ರಿಯಾ ಸುಳೆ ಅವರು, ಶರದ್ ಪವಾರ್ ಅವರು ಪಕ್ಷವನ್ನು ಮರುನಿರ್ಮಾಣ ಮಾಡುತ್ತಾರೆ ಮತ್ತು ಎನ್ಸಿಪಿ ಕಾರ್ಯಕರ್ತರು ಇನ್ನೂ ತಮ್ಮೊಂದಿಗೆ ಇದ್ದಾರೆ. ಮುಂದೆ ತಮ್ಮ ಬಣ ಸುಪ್ರೀಂ ಕೋರ್ಟ್ ಮೆಟ್ಟಿಲೇರಲಿದೆ ಎಂದು ಹೇಳಿದ್ದಾರೆ.
ನಮ್ಮ ದಾಖಲೆಗಳು ಚೆನ್ನಾಗಿಯೇ ಇದ್ದವು. ಈ ಪಕ್ಷದ ಸಂಸ್ಥಾಪಕ ಸದಸ್ಯ ಮತ್ತು ಸಂಸ್ಥಾಪಕ ನಾಯಕ ಶರದ್ ಪವಾರ್ ಮಾತ್ರ. ಆದರೆ ಈಗ ಬೇರೆಯೇ ವಾತಾವರಣವಿದೆ. ದೇಶದಲ್ಲಿ ಇದೆಲ್ಲವನ್ನೂ ಮಾಡುತ್ತಿರುವ ‘ಅದೃಶ್ಯ ಶಕ್ತಿ’ ಇದೆ. ನಾವು ಹೋರಾಟ ಮಾಡುತ್ತೇವೆ. ಖಂಡಿತವಾಗಿಯೂ ಸುಪ್ರೀಂ ಕೋರ್ಟ್ಗೆ ಹೋಗುತ್ತೇವೆ ಎಂದು ಸುಳೆ ಹೇಳಿದ್ದಾರೆ.
ಚುನಾವಣಾ ಆಯೋಗವು 6 ತಿಂಗಳಲ್ಲಿ 10 ಕ್ಕೂ ಹೆಚ್ಚು ವಿಚಾರಣೆಗಳ ನಂತರ ಎನ್ಸಿಪಿ ವಿವಾದವನ್ನು ಅಜಿತ್ ಪವಾರ್ ಅವರ ಬಣದ ಪರವಾಗಿ ಪರಿಹರಿಸಿದೆ.