ಬೆಂಗಳೂರು: ಮಾಜಿ ಸಂಸದ ಡಿ.ಕೆ.ಸುರೇಶ್ ತಂಗಿ ಎಂದು ಹೇಳಿಕೊಂಡು ಬೆಂಗಳೂರಿನ ಚಿನ್ನದಂಗಡಿ ಮಾಲಕಿಗೆ ವಂಚಿಸಿದ್ದ ಐಶ್ವರ್ಯ ಗೌಡ ಹಾಗೂ ಪತಿ ಹರೀಶ್ ಗೌಡ ವಂಚನೆ ಪ್ರಕರಣ ಬಗೆದಷ್ಟೂ ಬಯಲಾಗುತ್ತಿದೆ. ಐಶ್ವರ್ಯ ಗೌಡ ವಿರುದ್ಧ ಮಂಡ್ಯ ಹಾಗೂ ಮೈಸೂರಿನಲ್ಲಿಯೂ ವಂಚನೆ ಪ್ರಕರಣಗಳು ದಾಖಲಾಗಿವೆ.
ಚಿನ್ನ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಐಶ್ವರ್ಯ ಗೌಡ ವಿರುದ್ಧ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಈ ನಡುವೆ ಐಶ್ವರ್ಯ ಗೌಡ ದಂಪತಿ ಬಳಿ ಇದ್ದ BMW, ಫಾರ್ಚೂನರ್, ಔಡಿ ಕಾರುಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಈ ನಡುವೆ ಮಾಜಿ ಸಚಿವ ವಿನಯ್ ಕುಲಕರಣಿಗೆ ಸೇರಿದ ಕಾರನ್ನು ಐಶ್ವರ್ಯ ಗೌಡ ಹಾಗೂ ಪತಿ ಹರೀಶ್ ಗೌಡ ಬಳಸುತ್ತಿದ್ದರು ಎಂಬ ಮಾಹಿತಿ ಬಹಿರಂಗವಾಗಿದೆ.
ಕಾಂಗ್ರೆಸ್ ಶಾಸಕ ಮಾಜಿ ಸಚಿವ ವಿನಯ್ ಕುಲಕರಣಿ ಹಾಗೂ ಐಶ್ವರ್ಯ ಗೌಡ-ಪತಿ ಹರೀಶ್ ದಂಪತಿ ನಡುವೆ 50 ಕೋಟಿಗೂ ಅಧಿಕ ಹಣದ ವ್ಯವಹಾರ ನಡೆದಿರುವ ಬಗ್ಗೆ ತನಿಖೆಯಲ್ಲಿ ತಿಳಿದುಬಂದಿದೆ. ವಿನಯ್ ಕುಲಕರಣಿ ಕಾರನ್ನು ಐಶ್ವರ್ಯ ಗೌಡ ದಂಪತಿ ಬಳಸುತ್ತಿದ್ದರು. ಈ ಹಿನ್ನೆಲೆಯಲ್ಲಿ ಶಾಸಕ ವಿನಯ್ ಕುಲಕರಣಿಗೆ ನೋಟಿಸ್ ನೀಡಲು ಪೊಲಿಸರು ಮುಂದಾಗಿದ್ದು, ಕಾರನ್ನು ವಶಕ್ಕೆ ಪಡೆಯಲು ಸಿದ್ಧತೆ ನಡೆಸಿದ್ದಾರೆ.