ನವದೆಹಲಿ: 5ಜಿ ಸೇವೆಗೆ ಅಕ್ಟೋಬರ್ 1ರಂದು ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದ ಬೆನ್ನಲ್ಲೇ ಏರ್ಟೆಲ್ ದಾಖಲೆ ಬರೆದಿದೆ. ಆರಂಭದ 30 ದಿನಗಳಲ್ಲೇ 10 ಲಕ್ಷ 5ಜಿ ಗ್ರಾಹಕರನ್ನು ತಾನು ಹೊಂದಿರುವುದಾಗಿ ದೂರಸಂಪರ್ಕ ಕಂಪನಿ ಭಾರ್ತಿ ಏರ್ಟೆಲ್ ತಿಳಿಸಿದೆ.
ಸದ್ಯ ಇನ್ನೂ ಪೂರ್ಣ ಪ್ರಮಾಣದಲ್ಲಿ ಏರ್ಟೆಲ್ 5ಜಿ ಸೇವೆ ಆರಂಭವಾಗಿಲ್ಲ. ಸೇವೆಯನ್ನು ಹಂತ ಹಂತವಾಗಿ ವಿಸ್ತರಿಸುವುದಾಗಿ ಕಂಪೆನಿ ತಿಳಿಸಿತ್ತು. ಇದೀಗ ಸೇವೆ ವಿಸ್ತರಿಸುವ ಹಂತದಲ್ಲಿರುವಾಗಲೇ ಭಾರಿ ಸಂಖ್ಯೆಯ ಗ್ರಾಹಕರು ದೊರೆತಿದ್ದಾರೆ ಎಂದು ಅದು ಹೇಳಿಕೆ ನೀಡಿದೆ.
ಬೆಂಗಳೂರು ಸೇರಿ ದೇಶದ 13 ನಗರಗಳಲ್ಲಿ 5ಜಿ ಸೇವೆ ಆರಂಭವಾಗಿದೆ. ಮುಂಬೈ, ಚೆನ್ನೈ, ಹೈದರಾಬಾದ್, ಸಿಲಿಗುರಿ, ನಾಗ್ಪುರ ಹಾಗೂ ವಾರಾಣಸಿಗಳಲ್ಲಿ ಹಂತಹಂತವಾಗಿ 5ಜಿ ಸೇವೆ ಆರಂಭಿಸುವುದಾಗಿ ಏರ್ಟೆಲ್ ಹೇಳಿತ್ತು. ಈ ನಗರಗಳಲ್ಲಿ ಸೇವೆಯನ್ನು ವಿಸ್ತರಿಸುವ ಕೆಲಸ ನಡೆಯುತ್ತಿದೆ ಎಂದು ಈಗ ಕಂಪೆನಿ ಹೇಳಿಕೊಂಡಿದೆ. ನೆಟ್ವರ್ಕ್ ವಿಸ್ತರಣೆ ಕಾರ್ಯ ಪೂರ್ತಿ ನಡೆಯುವುದಕ್ಕೂ ಮುನ್ನವೇ ಗ್ರಾಹಕರಿಂದ ಉತ್ತಮ ಸ್ಪಂದನೆ ದೊರೆತಿದೆ’ ಎಂದು ಅದು ಹೇಳಿದೆ.