ನವದೆಹಲಿ: ದೇಶದ ಎರಡನೇ ಅತಿ ದೊಡ್ಡ ಟೆಲಿಕಾಂ ಸಂಸ್ಥೆ ಭಾರ್ತಿ ಏರ್ಟೆಲ್ ಮೊಬೈಲ್ ಚಂದಾದಾರಿಕೆ ದರಗಳನ್ನು ಹೆಚ್ಚಿಸಲು ಮುಂದಾಗಿದೆ.
ಲೋಕಸಭೆ ಚುನಾವಣೆ ಮುಗಿದ ಬಳಿಕ ಚಂದಾದಾರಿಕೆ ಮೊತ್ತ ಹೆಚ್ಚಿಸುವ ಸಾಧ್ಯತೆ ಇದೆ. ಮತ್ತೊಂದು ಪ್ರಮುಖ ಟೆಲಿಕಾಂ ಕಂಪನಿ ರಿಲಯನ್ಸ್ ಜಿಯೋ ಚಂದಾದಾರಿಕೆ ದರ ಹೆಚ್ಚಿಸುವ ಸಾಧ್ಯತೆ ಇಲ್ಲ. ಬದಲಿಗೆ ಹೆಚ್ಚಿನ ಡೇಟಾ ಬಳಕೆಗೆ ಉತ್ತೇಜನ ನೀಡುವ ಬಗ್ಗೆ ಗಮನಹರಿಸಲಿದೆ. ಈ ಮೂಲಕ ಹೆಚ್ಚಿನ ಶುಲ್ಕ ಸಂಗ್ರಹಿಸುವ ಯೋಜನೆ ರೂಪಿಸಿದೆ ಎಂದು ಹೇಳಲಾಗಿದೆ.
ಲೋಕಸಭೆ ಚುನಾವಣೆ ಮುಗಿದ ನಂತರ ಜುಲೈನಿಂದ ಅಕ್ಟೋಬರ್ ಅವಧಿಯಲ್ಲಿ ಏರ್ಟೆಲ್ ದರ ಹೆಚ್ಚಳ ಘೋಷಿಸುವ ನಿರೀಕ್ಷೆ ಇದೆ. ಶೇಕಡ 15ರಷ್ಟು ಸುಂಕ ಹೆಚ್ಚಳ ನಿರೀಕ್ಷೆ ಇದೆ. ಪ್ರಸ್ತುತ ಜಿಯೋಗೆ ಹೋಲಿಸಿದರೆ ಏರ್ಟೆಲ್ ಚಂದಾದಾರಿಕೆ ದರ ಹೆಚ್ಚಾಗಿವೆ. ಮತ್ತೆ ದರ ಏರಿಕೆ ಮಾಡಿದ್ದಲ್ಲಿ ಎರಡು ಕಂಪನಿಯ ದರಗಳ ನಡುವಿನ ಅಂತರ ಹೆಚ್ಚಾಗುತ್ತದೆ. ದರ ಏರಿಕೆಯ ಬದಲು ಗ್ರಾಹಕರ ಡೇಟಾ ಬಳಕೆ ಹೆಚ್ಚಿಸಿ ಹೆಚ್ಚುವರಿ ಸರಾಸರಿ ಆದಾಯ ಗಳಿಕೆಗೆ ಜಿಯೋ ಮುಂದಾಗಿದೆ. ಏರ್ಟೆಲ್ ನಿಂದ ಗ್ರಾಹಕರನ್ನು ಸೆಳೆಯಲು ಎದುರು ನೋಡುತ್ತಿದೆ.
ಟೆಲಿಕಾಂ ದೈತ್ಯ ರಿಲಯನ್ಸ್ ಜಿಯೋ ಮತ್ತು ಭಾರ್ತಿ ಏರ್‌ಟೆಲ್ ಸಂಸತ್ತಿನ ಚುನಾವಣೆಯ ನಂತರ ಸುಂಕ ಹೆಚ್ಚಳಕ್ಕೆ ವಿಭಿನ್ನ ತಂತ್ರಗಳನ್ನು ರೂಪಿಸುತ್ತಿವೆ. ಭಾರ್ತಿ ಏರ್‌ಟೆಲ್ ಹೆಡ್‌ಲೈನ್ ಸುಂಕಗಳನ್ನು ಹೆಚ್ಚಿಸಲು ಉದ್ದೇಶಿಸಿದೆ. ಆದರೆ ಜಿಯೋ ಬೇರೆ ಮಾರ್ಗವನ್ನು ಆರಿಸಿಕೊಳ್ಳಬಹುದು ಎನ್ನಲಾಗಿದೆ.