ದಿನಕಳೆದಂತೆ ಪ್ರತಿಯೊಬ್ಬ ವ್ಯಕ್ತಿಗೂ ವಯಸ್ಸಾಗುತ್ತಾ ಹೋಗುತ್ತದೆ…. ಒಂದಲ್ಲವೊಂದು ಕಾಯಿಲೆಗಳು ಶುರುವಾಗುತ್ತದೆ…. ಕೆಲವೊಮ್ಮೆ ಹಿರಿಯ ನಾಗರಿಕರ ಪಾಡು ಯಾರಿಗೂ ಬೇಡ ಅನಿಸುತ್ತದೆ….. ಏಷ್ಟೇ ಬೇಡವೆಂದರೂ, ಏನೇ ಮಾಡಿದರೂ ಬಾಳ ಮುಸ್ಸಂಜೆ ಎನ್ನುವುದು ಪ್ರತಿ ಜೀವಿಗೂ ಬಂದೆಬರುತ್ತದೆ. ಹಿರಿಯ ಜೀವಗಳನ್ನು ತಾಳ್ಮೆ ಹಾಗೂ ಸಹಾನುಭೂತಿಯಿಂದ ನೋಡಿಕೊಳ್ಳುವುದು ಮುಖ್ಯ. ಸಹಾನುಭೂತಿಯಿದ್ದರೆ ಹಿರಿಯರನ್ನೂ ಸಂತೋಷದಿಂದ ನೋಡಿಕೊಳ್ಳಬಹುದು ಎಂಬುದಕ್ಕೆ ಇಲ್ಲೊಂದು ಘಟನೆ ಸಾಕ್ಷಿಯಾಗಿದೆ. ಹಿರಿಯ ವ್ಯಕ್ತಿಯ ಮರೆವಿನ ಕಾಯಿಲೆಯನ್ನೇ ಮರೆಸಿದ ವಿಮಾನ ಪ್ರಯಾಣದ ಸಂದರ್ಭವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.
ವಿಮಾನ ಮೇಲಕ್ಕೇರುತ್ತಿದ್ದಂತೆ ಹಿರಿಯ ಪ್ರಯಾಣಿಕರೊಬ್ಬರಿಗೆ ಪ್ಯಾನಿಕ್ ಅಟ್ಯಾಕ್ ಆಗಿದೆ. ಜೊತೆಗೆ ಇದ್ದಕ್ಕಿದ್ದಂತೆ ತಾನು ಎಲ್ಲಿದ್ದೇನೆ? ಏನಾಗುತ್ತಿದೆ? ಎಲ್ಲವನ್ನೂ ಮರೆತು ಬಿಟ್ಟಿದ್ದಾರೆ. ಸೇಫ್ಟಿ ಬೆಲ್ಟ್ ತೆಗೆದು ಕುಳಿತಿದ್ದ ಜಾಗದಿಂದ ಮೇಲೆದ್ದ ವ್ಯಕ್ತಿ ತನ್ನ ಮಗಳನ್ನು ಕರೆಯಲಾರಂಭಿಸಿದ್ದಾರೆ. ನಾನಿಲ್ಲಿ ಇರಲ್ಲ. ತಕ್ಷಣ ನಾನು ಮನೆಗೆ ಹೋಗಬೇಕು. ಎಲ್ಲಿದ್ದೇನೆ ನಾನು? ಎಂದು ಬಡಬಡಿಸುತ್ತಾ ವಿಮಾನದ ತುಂಬೆಲ್ಲ ಓಡಾಡಲಾರಂಭಿಸಿದ್ದಾರೆ.
ವ್ಯಕ್ತಿಯ ಸ್ಥಿತಿಕಂಡು ಸಹಪ್ರಯಾಣಿಕರು ಗಾಬರಿಯಾಗಿದ್ದಾರೆ. ವ್ಯಕ್ತಿ ಲಿಂಡಾ, ಲಿಂಡಾ ಎಂದು ಮಗಳನ್ನು ಕೂಗಿ ಕರೆಯಲಾರಂಭಿಸಿದ್ದಾರೆ. ಈ ವೇಳೆ ಗಗನ ಸಖಿ ವ್ಯಕ್ತಿಯ ಬಳಿ ಬಂದು ಸಮಾಧಾನಪಡಿಸಿದ್ದಾರೆ. ದಯವಿಟ್ಟು ಕುಳಿತುಕೊಳ್ಳಿ. ಇದು ವಿಮಾನ ಈಗಾಗಲೇ ವಿಮಾನ ಭೂಮಿಯಿಂದ ತುಂಬಾ ಮೇಲೆ ಬಂದಿದೆ. ಲ್ಯಾಂಡ್ ಆಗುತ್ತಿದ್ದಂತೆ ಮನೆಗೆ ಕರೆದುಕೊಂಡು ಹೋಗುತ್ತೇವೆ. ನಿಮ್ಮ ಸೀಟಿನಲ್ಲಿ ಕುಳಿತುಕೊಳ್ಳಿ. ಏನೂ ಆಗುವುದಿಲ್ಲ, ಗಾಬರಿಯಾಗಬೇಡಿ ಎಂದು ಸಮಾಧಾನಪಡಿಸಿದ್ದಾಳೆ. ಜೊತೆ ಪ್ರಯಾಣಿಕರು ಕೂಡ ಶಾಂತಚಿತ್ತದಿಂದ ಸಹಕರಿಸಿದ್ದಾರೆ. ಇದೇ ವೇಳೆ ವ್ಯಕ್ತಿಯ ಬಳಿ ಬಂದ ಮಗಳು ಸೀಟಿನಲ್ಲಿ ಕುಳಿತುಕೊಳ್ಳುವಂತೆ ಹೇಳಿದ್ದಾಳೆ. ಅಷ್ಟರಲ್ಲಿ ವ್ಯಕ್ತಿ ಮಗಳ ಗುರುತು ಮರೆತಿದ್ದಾರೆ. ಬೈಯ್ಯಲಾರಂಭಿಸಿದ್ದಾರೆ. ತಾಳ್ಮೆ ಕಳೆದುಕೊಳ್ಳದ ಮಗಳು, ತಂದೆಯನ್ನು ಮಗುವಿನಂತೆ ಸಂತೈಸಿದ್ದಾಳೆ. ಸಹಪ್ರಯಾಣಿಕರು ವ್ಯಕ್ತಿಗೆ ಸಹಾನುಭೂತಿ ತೋರಿ ಹಾಡು ಹಾಡಿದ್ದಾರೆ. ಮೊದಲಿನ ಸ್ಥಿಗೆ ಬಂದ ವ್ಯಕ್ತಿ ತನ್ನ ಸೀಟಿನಲ್ಲಿ ಕುಳಿತು ಪ್ರಯಾಣ ಮುಂದುವರೆಸಿದ್ದಾರೆ. ಹಿರಿಯ ವ್ಯಕ್ತಿಗಳನ್ನು ಮಕ್ಕಳಂತೆ ತುಂಬಾ ತಾಳ್ಮೆ, ಸಹನೆಯಿಂದ ನೋಡಿಕೊಳ್ಳಬೇಕು ಎಂಬುದಕ್ಕೆ ಇದೊಂದು ಘಟನೆ ನಿದರ್ಶನ.