ಭಾರತೀಯ ವಾಯುಯಾನ ಕ್ಷೇತ್ರವನ್ನು ಬಲಪಡಿಸುವ ಉದ್ದೇಶದಿಂದ ವಡೋದರಾದಲ್ಲಿರುವ ಭಾರತೀಯ ರೈಲ್ವೆಯ ಗತಿ ಶಕ್ತಿ ವಿಶ್ವವಿದ್ಯಾಲಯ ಮತ್ತು ವಾಣಿಜ್ಯ ವಿಮಾನ ತಯಾರಕ ಸಂಸ್ಥೆಯಾದ ಏರ್ಬಸ್ ಗುರುವಾರ ಎಂಒಯು ಒಂದಕ್ಕೆ ಸಹಿ ಹಾಕಿದೆ. ಈ ಸಹಯೋಗವು ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳಿಗೆ ಅತೀ ಹೆಚ್ಚಿನ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ನಿರೀಕ್ಷೆಯಿದೆ.
ರೈಲ್ವೇ ಸಚಿವಾಲಯದ ಪ್ರಕಾರ, ಏರ್ಬಸ್ ಸಂಸ್ಥೆ ನಡೆಸುವ ಭಾರತೀಯ ಕಾರ್ಯಾಚರಣೆಯಲ್ಲಿ ಸರಿಸುಮಾರು 15,000 ವಿದ್ಯಾರ್ಥಿಗಳನ್ನು ಬಳಸಿಕೊಳ್ಳುತ್ತೆ ಎಂದು ಹೇಳಲಾಗಿದೆ. ರೈಲ್ ಭವನದಲ್ಲಿ ಏರ್ಬಸ್ ಇಂಡಿಯಾ ಮತ್ತು ದಕ್ಷಿಣ ಏಷ್ಯಾದ ಅಧ್ಯಕ್ಷ, ವ್ಯವಸ್ಥಾಪಕ ನಿರ್ದೇಶಕ ರೆಮಿ ಮೈಲಾರ್ಡ್ ಮತ್ತು ಜಿ.ಎಸ್.ವಿ. ಯ ಉಪಕುಲಪತಿ ಪ್ರೊ. ಮನೋಜ್ ಚೌಧರಿ ಅವರು ಈ ಪಾಲುದಾರಿಕೆಗೆ ಅಧಿಕೃತವಾಗಿ ಸಹಿ ಹಾಕುವ ಮೂಲಕ ಕಾರ್ಯಾರಂಭ ಮಾಡಲಾಯಿತು.
ಗುಜರಾತ್ನ ವಡೋದರಾದಲ್ಲಿ ಅತ್ಯಾಧುನಿಕ C295 ವಿಮಾನ ಸೌಲಭ್ಯವನ್ನು ಸ್ಥಾಪಿಸಲು ಈಗಾಗಲೇ ಏರ್ಬಸ್ ಮತ್ತು ಟಾಟಾ ಸಂಸ್ಥೆಯು ಇತ್ತೀಚಿಗೆ ಘೋಷಣೆ ಮಾಡಿರುವ ಯೋಜನೆಯಲ್ಲಿಯೇ ಈ ಎಂಒಯು ಬರುತ್ತೆ. ಈ ಜಂಟಿ ಪ್ರಯತ್ನವು ಏರೋಸ್ಪೇಸ್ ವಲಯದಲ್ಲಿ ಹೊಸತನ, ವಿನ್ಯಾಸ, ಉತ್ಪಾದನೆ ಮತ್ತು ಅಭಿವೃದ್ಧಿಗೆ ವೇಗವನ್ನು ನೀಡಲಿದೆ.
ಭಾರತದಲ್ಲಿ ಏರೋಸ್ಪೇಸ್ ಉದ್ಯಮಕ್ಕೆ ಪ್ರೋತ್ಸಾಹ ನೀಡುವ ಸಲುವಾಗಿ ಏರ್ಬಸ್ ಸಂಸ್ಥೆಯ ತೊಡಗಿಸಿಕೊಳ್ಳುವಿಕೆ ಮತ್ತು ಇಲ್ಲಿನ ಮಾನವ ಶಕ್ತಿಯನ್ನು ಅಭಿವೃದ್ಧಿಯಲ್ಲಿ ಬಳಕೆ ಮಾಡಿಕೊಳ್ಳುವ ಬಗ್ಗೆ ರೆಮಿ ಮೈಲಾರ್ಡ್ ಒತ್ತಿ ಹೇಳಿದ್ದಾರೆ. ಗತಿ ಶಕ್ತಿ ವಿಶ್ವವಿದ್ಯಾಲಯದ ಸಹಭಾಗಿತ್ವದ ಮೂಲಕ ದೇಶದಲ್ಲಿ ನುರಿತ ಉದ್ಯೋಗಿಗಳ ತಂಡ ಅಭಿವೃದ್ಧಿಯಾಗುತ್ತೆ. ಇದರ ಜೊತೆ ವೇಗವಾಗಿ ಬೆಳೆಯುತ್ತಿರುವ ಏರೋಸ್ಪೇಸ್ ವಲಯಕ್ಕೆ ಸೇವೆ ಸಲ್ಲಿಸಲು ಭವಿಷ್ಯದಲ್ಲಿ ಇವರೆಲ್ಲಾ ಸಿದ್ಧವಾಗಲಿದ್ದಾರೆ ಎಂದು ಮೈಲಾರ್ಡ್ ಹೇಳಿದರು.
ಇದೇ ಸಂದರ್ಭ ಮಾತನಾಡಿದ ರೈಲ್ವೇ ಸಚಿವರು ಉದ್ಯಮ ಮತ್ತು ಅಕಾಡೆಮಿಯಾ ಈ ಪಾಲುದಾರಿಕೆಗಳಿಗೆ ವಿಶ್ವವಿದ್ಯಾನಿಲಯ ಎಂದಿಗೂ ತಮ್ಮ ಬದ್ಧತೆಯನ್ನು ತೋರಿಸುತ್ತೆ ಎಂದು ಹೇಳಿದ್ರು. ಎಲ್ಲಾ ಕೋರ್ಸ್ಗಳನ್ನು ಸಹ ಉದ್ಯಮಕ್ಕೆ ಪೂರಕವಾಗುವಂತೆ ರೂಪಿಸುತ್ತೇವೆ ಎಂದು ಹೇಳಿದರು. ಸಾರಿಗೆ ಮತ್ತು ಲಾಜಿಸ್ಟಿಕ್ಸ್ ವಲಯಗಳು ಬಯಸುವ ಪದವೀಧರರನ್ನು ಸೃಷ್ಟಿ ಮಾಡುತ್ತೇವೆ. ಈ ಉದ್ದೇಶವನ್ನು ಈಡೇರಿಸುವುದಕ್ಕೆ ಏರ್ಬಸ್ನೊಂದಿಗಿನ ಎಂಒಯು ಮಹತ್ವದ ಹೆಜ್ಜೆಯಾಗಿದೆ ಎಂದು ಶ್ಲಾಘಿಸಿದ್ರು.