ತನ್ನ ವಾಸ್ತವ್ಯದಲ್ಲಿ ನೆಲೆಸಿದ್ದ ದಂಪತಿಗಳು ಮಾಡಿದ ಅವಾಂತರಕ್ಕಾಗಿ ಏರ್‌ಬಿಎನ್‌ಬಿ ಸಂಯೋಜಕರೊಬ್ಬರಿಗೆ $1,570 (1.28 ಲಕ್ಷ ರೂ) ಹೊರೆ ಬಿದ್ದಿರುವ ಘಟನೆ ದಕ್ಷಿಣ ಕೊರಿಯಾದಲ್ಲಿ ಜರುಗಿದೆ.
ತಮ್ಮ ಬುಕಿಂಗ್ ಅನ್ನು ರದ್ದು ಮಾಡಲು ಸಾಧ್ಯವಾಗದೇ ಇದ್ದ ಕಾರಣದಿಂದ ಸಿಟ್ಟಿಗೆದ್ದ ದಂಪತಿ ಏರ್‌ಬಿಎನ್‌ಬಿ ಆಸ್ತಿಯ ಮಾಲೀಕನ ವಿರುದ್ಧ ಸೇಡು ತೀರಿಸಿಕೊಳ್ಳಲೆಂದು ಹೀಗೆ ಮಾಡಿದ್ದಾರೆ. ಚೀನಾದಿಂದ ಪ್ರವಾಸಕ್ಕೆ ಬಂದಿದ್ದ ಈ ದಂಪತಿ, ಏರ್‌ಬಿಎನ್‌ಬಿ ಆಸ್ತಿಯಲ್ಲಿ 25 ದಿನಗಳ ಮಟ್ಟಿಗೆ ತಂಗಿದ್ದರು. ಈ ವೇಳೆ ಔಟ್‌ಲೆಟ್‌ನಲ್ಲಿ ಲಭ್ಯವಿದ್ದ ಸವಲತ್ತುಗಳನ್ನು ಬೇಕಂತಲೇ ಹುಚ್ಚಾಪಟ್ಟೆ ಬಳಕೆ ಮಾಡಿದ್ದಾರೆ ದಂಪತಿಗಳು.
ಸಿಯೋಲ್ ಭೇಟಿ ಕೊಟ್ಟ ವೇಳೆ ಅಲ್ಲಿ ತಂಗಲೆಂದು ವಿಲ್ಲಾವೊಂದನ್ನು ಬುಕ್ ಮಾಡಿದ್ದ ದಂಪತಿಗೆ, ಆ ವಿಲ್ಲಾ ನಗರದ ಹೊರವಲಯದಲ್ಲಿದೆ ಎಂದು ಸಿಯೋಲ್‌ನಲ್ಲಿ ಲ್ಯಾಂಡ್ ಆದ ನಂತರವಷ್ಟೇ ತಿಳಿದು ಬಂದಿದೆ. ಬಳಿಕ ತಮ್ಮ ವಿಲ್ಲಾ ಬುಕಿಂಗ್ ರದ್ದು ಮಾಡಲು ಯತ್ನಿಸಿದಾಗ ಅದು ಫಲಕೊಡಲಿಲ್ಲ.
ಇದರಿಂದ ಸಿಟ್ಟಿಗೆದ್ದ ದಂಪತಿ ತಾವು ಆ ವಿಲ್ಲಾದಲ್ಲಿದ್ದಷ್ಟು ದಿನವೂ ಎಲ್ಲಾ ಲೈಟ್‌ಗಳು, ನಲ್ಲಿಗಳು, ವಿದ್ಯುತ್ ಪರಿಕರಗಳು, ಗ್ಯಾಸ್ ಸಂಪರ್ಕವನ್ನು ಆನ್ ಮಾಡಿಟ್ಟ ಕಾರಣ ಹೀಗಾಗಿದೆ ಎಂದಿದ್ದಾರೆ ವಿಲ್ಲಾ ಮಾಲೀಕ ಲೀ.
ವಿಲ್ಲಾದಲ್ಲಿ ವಾಸಿಸುವ ಬದಲಿಗೆ ದಕ್ಷಿಣ ಕೊರಿಯಾದ ಎಲ್ಲೆಡೆ ಸುತ್ತಾಡಿ ಬಂದ ಈ ದಂಪತಿ, 25 ದಿನಗಳ ಅವಧಿಯಲ್ಲಿ ಕೇವಲ ಐದು ದಿನಗಳ ಮಟ್ಟಿಗೆ ಮಾತ್ರವೇ ಅಲ್ಲಿಗೆ ಆಗಮಿಸಿದ್ದರು.
ಈ ದಂಪತಿ ಚೆಕ್‌ಔಟ್ ಆಗುವ ವೇಳೆ ಲೀರನ್ನು ಸಂಪರ್ಕಿಸಿದ ಗ್ಯಾಸ್ ಕಂಪನಿ, ಗ್ಯಾಸ್ ಬಳಕೆಯಲ್ಲಿ ವಿಪರೀತ ಹೆಚ್ಚಳವಾಗಿರುವುದನ್ನು ಗಮನಕ್ಕೆ ತಂದಿದೆ. ಈ ವಿಲ್ಲಾಗೆ ಭೇಟಿ ಕೊಟ್ಟ ಲೀಗೆ ಅಲ್ಲಿ ತೆರೆದ ಕಿಟಕಿಗಳು ಹಾಗೂ ಚಾಲನೆಯಲ್ಲಿರುವ ಗ್ಯಾಸ್ ಕೊಳವೆಗಳು ಕಣ್ಣಿಗೆ ಬಿದ್ದಿವೆ.
ದಂಪತಿಗಳು ಇಲ್ಲಿದ್ದ ಅವಧಿಗೆ $116 (₹9,506) ನೀರು ಹಾಗೂ ವಿದ್ಯುತ್ ಬಿಲ್, $730 (₹59,824) ಗ್ಯಾಸ್ ಬಿಲ್ ಹಾಗೂ $728 (₹59,660) ಇತರೆ ಬಿಲ್ ಹೊರೆ ಬಿದ್ದಿದೆ. ಈ ಅವಧಿಯಲ್ಲಿ ದಂಪತಿಯು 1,20,000 ಲೀನಷ್ಟು ನೀರು ಬಳಸಿದ್ದಾರೆ ಎಂದು ಲೀ ತಿಳಿಸಿದ್ದಾರೆ.