ಬೆಂಗಳೂರು: ಏರೋ ಇಂಡಿಯಾ ಏರ್ ಶೋ-2025ಕ್ಕೆ ಕ್ಷಣಗಣನೆ ಆರಂಭವಾಗಿದೆ. ನಾಳೆಯಿಂದ ಯಲಹಂಕ ವಾಯುನೆಲೆಯಲ್ಲಿ ಲೋಹದ ಹಕ್ಕಿಗಳ ಕಲರವ ಆರಂಭವಾಗಲಿದೆ. ಈ ಹಿನ್ನೆಲೆಯಲ್ಲಿ ಇಂದು ಏರ್ ಶೋ ರಿಹರ್ಸಲ್ ನಡೆದಿದ್ದು, ಪೊಲೀಸ್ ಸಿಬ್ಬಂದಿಗಳು ಕೂಡ ಭಾಗಿಯಾಗಿದ್ದರು. ಏರ್ ಶೋ ರಿಹರ್ಸಲ್ ವೇಳೆ ಎಡವಟ್ಟು ನಡೆದಿದ್ದು, ಪೊಲೀಸರಿಗೆ ನೀಡಿದ ಊಟದಲ್ಲಿ ಜಿರಳೆ ಪತ್ತೆಯಾಗಿರುವ ಘಟನೆ ನಡೆದಿದೆ.
ಇಂದು ನಡೆದ ಏರ್ ಶೋ ರಿಹರ್ಸಲ್ ವೇಳೆ ಪೊಲೀಸ್ ಸಿಬ್ಬಂದಿಗಳಿಗೆ ಮಧ್ಯಾಹ್ನ ಊಟದ ವ್ಯವಸ್ಥೆ ಮಾಡಲಾಗಿತ್ತು. ಪೊಲೀಸ್ ಸಿಬ್ಬಂದಿಗಳಿಗೆ ನೀಡಿದ್ದ ಊಟದಲ್ಲಿ ಜಿರಳೆ ಪತ್ತೆಯಾಗಿದ್ದು, ಹಲವು ಸಿಬ್ಬಂದಿಗಳು ಊಟವನ್ನೇ ಮಾಡದೇ ಹಾಗೇಯೇ ಇದ್ದಾರೆ.
ಏರ್ ಶೋ ರಿಹರ್ಸಲ್ ಗೆ ಬಂದಿದ್ದ ಪೊಲೀಸರಿಗೆ ಯಲಹಂಕ ಠಾಣೆ ಇನ್ಸ್ ಪೆಕ್ಟರ್ ಕೃಷ್ಣಮೂರ್ತಿ ಊಟದ ವ್ಯವಸ್ಥೆ ಮಾಡಿದ್ದರು. ಯಲಹಂಕ ಠಾಣೆಯಿಂದಲೇ ಊಟದ ವ್ಯವಸ್ಥೆ ಮಾಡಲಾಗಿತ್ತು. ಆದರೆ ಊಟದಲ್ಲಿ ಜಿರಳೆ ಪತ್ತೆಯಾಗಿದೆ ಎಂದು ತಿಳಿದುಬಂದಿದೆ.
ಭದ್ರತೆಗೆ ಬರುವ ಪೊಲೀಸರಿಗೆ ಒಂದು ಊಟಕ್ಕೆ 200 ರೂಪಾಯಿ ಕೊಡುವುದಾಗಿ ಪೊಲೀಸ್ ಮಹಾನಿರ್ದೇಶಕರಿಂದ ಫೆ.4ರಂದು ಆದೇಶ ಪ್ರಕಟವಾಗಿತ್ತು. ಆದೇಶವಾಗಿ ಕೆಲವೇ ದಿನಗಳಲ್ಲಿ ಗುಣಮಟ್ಟ, ಶುಚಿತ್ವ ಇಲ್ಲದ ಆಹಾರ ಪೂರೈಕೆಯಾಗಿರುವುದಕ್ಕೆ ಹಲವರು ಬೇಸರ ವ್ಯಕ್ತಪಡಿಸಿದ್ದಾರೆ.