ಬೆಂಗಳೂರು: ಏಷ್ಯಾದ ಅತಿದೊಡ್ಡ ಮಿಲಿಟರಿ ವಾಯುಯಾನ ಪ್ರದರ್ಶನ ಏರೋ ಇಂಡಿಯಾ ಬೆಂಗಳೂರಿನಲ್ಲಿ ನಡೆಯಲಿದೆ. ಬೆಂಗಳೂರು ಏರ್ ಶೋಗೆ ಮಾಡಿಕೊಂಡಿರುವ ಸಿದ್ಧತೆ ತೃಪ್ತಿ ತಂದಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
ವಿಧಾನಸೌಧದಲ್ಲಿ ನಡೆದ ಸಭೆಯ ನಂತರ ಮಾತನಾಡಿದ ಅವರು, ವೈಮಾನಿಕ ಕ್ಷೇತ್ರದಲ್ಲಿ ಬೆಂಗಳೂರಿನ ಕೊಡುಗೆ ಮಹತ್ವದ್ದಾಗಿದೆ. ಬೆಂಗಳೂರಿಗೆ ಏರ್ ಶೋ ನಡೆಸಿ ಸಾಕಷ್ಟು ಅನುಭವ ಇದೆ. ಇಷ್ಟು ಅನುಭವ ಬೇರೆ ಯಾವುದೇ ನಗರಗಳಿಗೆ ಇಲ್ಲ ಎಂದು ಹೇಳಿದ್ದಾರೆ.
ಎಲ್ಲ ರೀತಿಯ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳುವುದರೊಂದಿಗೆ ಏರ್ ಶೋ ನಡೆಸಲಾಗುತ್ತದೆ. ರಕ್ಷಣಾ ಸಚಿವಾಲಯ ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ. ಕೊರೋನಾ ಹಿನ್ನೆಲೆಯಲ್ಲಿ ಸುರಕ್ಷತಾ ಕ್ರಮ ಕೈಗೊಳ್ಳಲಾಗುವುದು. ಕಳೆದ ಬಾರಿ ನಡೆದ ದುರ್ಘಟನೆ ಮರುಕಳಿಸದಂತೆ ಎಚ್ಚರಿಕೆ ವಹಿಸಲಾಗುವುದು ಎಂದು ಹೇಳಿದ್ದಾರೆ.
ಏರ್ ಶೋಗೆ ಅವಕಾಶ ನೀಡಿದ್ದಕ್ಕೆ ಕೇಂದ್ರ ಸರ್ಕಾರಕ್ಕೆ ಧನ್ಯವಾದ ಹೇಳ ಬಯಸುತ್ತೇನೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದಾರೆ. ಈ ಬಾರಿ ಏರ್ ಶೋಗೆ ರಾಜ್ಯ ಸರ್ಕಾರದಿಂದ 30 ಕೋಟಿ ರೂಪಾಯಿ ಖರ್ಚು ಮಾಡಲಾಗುವುದು ಎಂದು ತಿಳಿಸಿದ್ದಾರೆ.
1996 ರಿಂದ ಬೆಂಗಳೂರಿನಲ್ಲಿ ಏರ್ ಶೋ ನಡೆಯುತ್ತಿದೆ. ರಾಜ್ಯ ಸರ್ಕಾರ ಎಲ್ಲ ರೀತಿಯ ಸಹಕಾರ ನೀಡುತ್ತದೆ. ಕೊರೊನಾ ಹಿನ್ನೆಲೆಯಲ್ಲಿ ಮುಂಜಾಗ್ರತೆ ಕ್ರಮಗಳೊಂದಿಗೆ ಏರ್ ಶೋ ನಡೆಸಲಾಗುವುದು. ವೈಮಾನಿಕ ಮತ್ತು ರಕ್ಷಣಾ ಕ್ಷೇತ್ರಕ್ಕೆ ರಾಜ್ಯದ ಕೊಡುಗೆ ಮಹತ್ತರವಾದದ್ದು ಎಂದು ಹೇಳಿದ್ದಾರೆ. ಸಿಡಿಎಸ್ ಬಿಪಿನ್ ರಾವತ್ ಮೊದಲಾದವರು ಇದ್ದರು.