ಬೆಂಗಳೂರು: ‘ಸದನಕ್ಕೆ ಬಾರದೆ, ಜನರ ಆಶೋತ್ತರಗಳ ಚರ್ಚೆಯಲ್ಲಿ ಭಾಗವಹಿಸದ ನಾಯಕರೊಬ್ಬರು ಏರ್ ಶೋ ಬಡವರ ಪರವೇ ಎಂದು ಪ್ರಶ್ನಿಸುವ ಮೂಲಕ ತಮ್ಮ ಅಪ್ರಬುದ್ಧತೆ ಪ್ರದರ್ಶಿಸಿದ್ದಾರೆ.’
ಹೀಗೆಂದು ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಚಾಟಿ ಬೀಸಿದ್ದಾರೆ. ವಿಧಾನ ಪರಿಷತ್ ನಲ್ಲಿ ರಾಜ್ಯಪಾಲರ ಭಾಷಣಕ್ಕೆ ವಂದನಾ ನಿರ್ಣಯದ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಆಯನೂರು ಮಂಜುನಾಥ್, ದೇಶದ ರಕ್ಷಣಾ ಸಾಮರ್ಥ್ಯ, ತಂತ್ರಜ್ಞಾನದ ಬಲವನ್ನು ವಿಶ್ವದ ಎದುರು ಅನಾವರಣ ಮಾಡುವ, ನೇರ ಮತ್ತು ಪರೋಕ್ಷವಾಗಿ ಉದ್ಯೋಗಗಳನ್ನು ಸೃಷ್ಟಿಸುವ ಏರ್ ಶೋ ಬಗ್ಗೆ ನಾಯಕರೊಬ್ಬರು ಪ್ರಶ್ನಿಸಿದ್ದಾರೆ ಎಂದು ಹೇಳಿದ್ದಾರೆ.
ಸದನದ ಕಲಾಪದಲ್ಲಿ ಭಾಗವಹಿಸಿ ಬಡವರ ಬಗ್ಗೆ ಪ್ರಶ್ನಿಸಲು, ಮಾತನಾಡಲು ಅವಕಾಶವಿದೆ. ಆದರೆ, ಮಾಧ್ಯಮಗಳ ಎದುರು, ಸಭೆ, ಸಮಾರಂಭಗಳಲ್ಲಿ ಬಡವರ ಬಗ್ಗೆ ಪಂಖಾನುಪುಂಖ ಹೇಳಿಕೆ ನೀಡಲು ಸೀಮಿತರಾದ ನಾಯಕ ಏರ್ ಶೋ ಪ್ರಶ್ನಿಸುವ ಅಪ್ರಬುದ್ಧತೆ ಪ್ರದರ್ಶಿಸಿದ್ದಾರೆ ಎಂದು ಹೆಚ್.ಡಿ. ಕುಮಾರಸ್ವಾಮಿ ಹೆಸರು ಹೇಳದೆ ತಿವಿದಿದ್ದಾರೆ.