ಬೆಂಗಳೂರು: ವಾಹನ ಚಾಲಕರು, ಮಾಲೀಕರ ತೀವ್ರ ಆಕ್ರೋಶಕ್ಕೆ ಮಣಿದ ಏರ್ಪೋರ್ಟ್ ಸಂಸ್ಥೆ ಪ್ರತಿ 7 ನಿಮಿಷಕ್ಕೆ 150 ರೂಪಾಯಿ ಶುಲ್ಕ ವಿಧಿಸುವುದನ್ನು ವಾಪಸ್ ಪಡೆದಿದೆ. ಶುಲ್ಕದ ಫಲಕವನ್ನೇ ಬಿಐಎಎಲ್ ತೆರವುಗೊಳಿಸಿದೆ.
ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಪ್ರವೇಶಿಸುವ ವಾಹನಗಳಿಂದ ಶುಲ್ಕ ವಸೂಲಿ ಮಾಡುವ ಆದೇಶಕ್ಕೆ ಭಾರಿ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಮಂಗಳವಾರ ಶುಲ್ಕ ಸಂಗ್ರಹಕ್ಕೆ ತಡೆ ಹಿಡಿಯಲಾಗಿತ್ತು.
ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರನ್ನು ಹತ್ತಿಸುವುದು ಮತ್ತು ಇಳಿಸಲು ಹೋಗುವ ವಾಣಿಜ್ಯ ವಾಹನಗಳು ಪಿಕಪ್ ಲೈನ್ ಪ್ರವೇಶಿಸಲು 7 ನಿಮಿಷಕ್ಕೆ 150 ರೂಪಾಯಿ ಶುಲ್ಕ ಪಾವತಿಸಬೇಕು ಎಂದು ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಸಂಸ್ಥೆ ಆದೇಶಿಸಿತ್ತು. ಈ ಬಗ್ಗೆ ಫಲಕವನ್ನು ಹಾಕಲಾಗಿತ್ತು. ಇದಕ್ಕೆ ಭಾರಿ ವಿರೋಧ ವ್ಯಕ್ತವಾಗಿತ್ತು. ಕೋರ್ಟ್ ಮೊರೆ ಹೋಗುವುದಾಗಿ ಹೇಳಲಾಗಿತ್ತು. ಅಲ್ಲದೇ, ವಿಮಾನ ನಿಲ್ದಾಣದವರೆಗೆ ಪ್ರಯಾಣಿಕರನ್ನು ಕರೆತರದೆ ಟೋಲ್ ಗೇಟ್ ಅಥವಾ ನಿಲ್ದಾಣದ ಹೊರಭಾಗದಲ್ಲಿ ಇಳಿಸುವುದಾಗಿ ಎಚ್ಚರಿಕೆ ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ವಾಣಿಜ್ಯ ವಾಹನಗಳಿಂದ ಪಿಕ್ ಅಪ್ಲೈನ್ ಪ್ರವೇಶಕ್ಕೆ ಶುಲ್ಕ ಪಡೆಯದಿರಲು ನಿರ್ಧರಿಸಲಾಗಿದೆ ಎಂದು ಹೇಳಲಾಗಿದೆ.