ನವದೆಹಲಿ: ದೆಹಲಿಯಲ್ಲಿ ವಾಯುಮಾಲಿನ್ಯ ಹೆಚ್ಚಾದ ಹಿನ್ನೆಲೆಯಲ್ಲಿ ಇಂದಿನಿಂದ ಶಾಲಾ ಕಾಲೇಜುಗಳನ್ನು ಬಂದ್ ಮಾಡಲಾಗಿದೆ. ಮುಂದಿನ ಆದೇಶದವರೆಗೆ ಶಾಲೆ-ಕಾಲೇಜುಗಳನ್ನು ಬಂದ್ ಮಾಡುವಂತೆ ಆದೇಶಿಸಲಾಗಿದೆ.
ದೆಹಲಿ ವಾಯುಮಾಲಿನ್ಯ ತಡೆಗೆ ಸಂಬಂಧಿಸಿದಂತೆ ನಡೆದ ತುರ್ತು ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಶೇಕಡ 50 ರಷ್ಟು ಸರ್ಕಾರಿ ನೌಕರರು ನವೆಂಬರ್ 21ರ ವರೆಗೆ ವರ್ಕ್ ಫ್ರಂ ಹೋಮ್ ಮಾಡಲು ಸೂಚನೆ ನೀಡಲಾಗಿದೆ.
ಭಾರಿ ಗಾತ್ರದ ಟ್ರಕ್ ಗಳಿಗೆ ದೆಹಲಿ ಒಳಗೆ ಪ್ರವೇಶ ನಿರ್ಬಂಧಿಸಲಾಗಿದೆ. ಅಗತ್ಯ ವಸ್ತುಗಳನ್ನು ಸಾಗಿಸುವ ಟ್ರಕ್ ಗಳಿಗೆ ಮಾತ್ರ ಅವಕಾಶ ನೀಡಲಾಗಿದೆ. ಕಟ್ಟಡ ನಿರ್ಮಾಣ ಕೆಲಸವನ್ನು ಸಂಪೂರ್ಣ ಬಂದ್ ಮಾಡಲಾಗಿದ್ದು, ರೈಲ್ವೆ, ಮೆಟ್ರೋ, ಕಟ್ಟಡ ನಿರ್ಮಾಣ ಕಾಮಗಾರಿಗಳನ್ನು ಸಂಪೂರ್ಣ ಬಂದ್ ಮಾಡಲಾಗುವುದು. ಮಾಲಿನ್ಯಕಾರಕ ವಾಹನಗಳ ಕಟ್ಟುನಿಟ್ಟಿನ ತಪಾಸಣೆಗೆ ಸೂಚನೆ ನೀಡಲಾಗಿದೆ.
ಇದರೊಂದಿಗೆ ಉಷ್ಣ ವಿದ್ಯುತ್ ಸ್ಥಾವರಗಳನ್ನು ಕೂಡ ಬಂದ್ ಮಾಡಲು ತಿಳಿಸಲಾಗಿದೆ. ನವೆಂಬರ್ 30 ರ ವರೆಗೆ ಒಟ್ಟು 11 ಉಷ್ಣ ವಿದ್ಯುತ್ ಸ್ಥಾವರಗಳನ್ನು ಬಂದ್ ಮಾಡಲು ತಿಳಿಸಲಾಗಿದೆ. ದೆಹಲಿಯಿಂದ 300 ಕಿಲೋಮೀಟರ್ ದೂರದವರೆಗೂ ಇರುವ ಸ್ಥಾವರಗಳನ್ನು ನವೆಂಬರ್ 30ರವರೆಗೆ ಬಂದ್ ಮಾಡಲು ಉದ್ದೇಶಿಸಲಾಗಿದೆ.