ನವದೆಹಲಿ: ಮಧ್ಯಪ್ರಾಚ್ಯದ ಭಾಗಗಳಲ್ಲಿ ಉದ್ವಿಗ್ನತೆ ಹೆಚ್ಚಿದ ಹಿನ್ನಲೆಯಲ್ಲಿ ಟೆಲ್ ಅವೀವ್‌ಗೆ ಮತ್ತು ಅಲ್ಲಿಂದ ಹೊರಡುವ ಎಲ್ಲಾ ವಿಮಾನಗಳನ್ನು ತಕ್ಷಣವೇ ಸ್ಥಗಿತಗೊಳಿಸುವುದಾಗಿ ಏರ್ ಇಂಡಿಯಾ ಶುಕ್ರವಾರ ಘೋಷಿಸಿದೆ.
ವಿಮಾನಯಾನ ಸಂಸ್ಥೆಯು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ. ತನ್ನ ಪ್ರಯಾಣಿಕರು ಮತ್ತು ಸಿಬ್ಬಂದಿಯ ಸುರಕ್ಷತೆಗೆ ಆದ್ಯತೆ ನೀಡುತ್ತಿದೆ ಎಂದು ಹೇಳಿದೆ.
ಮಧ್ಯಪ್ರಾಚ್ಯದ ಕೆಲವು ಭಾಗಗಳಲ್ಲಿನ ಪ್ರಸ್ತುತ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಟೆಲ್ ಅವಿವ್‌ಗೆ ಮತ್ತು ಅಲ್ಲಿಂದ ಹೊರಡುವ ನಮ್ಮ ವಿಮಾನಗಳ ನಿಗದಿತ ಕಾರ್ಯಾಚರಣೆಯನ್ನು ಮುಂದಿನ ಸೂಚನೆ ಬರುವವರೆಗೆ ತಕ್ಷಣದಿಂದ ಜಾರಿಗೆ ಬರುವಂತೆ ಸ್ಥಗಿತಗೊಳಿಸಲಾಗಿದೆ ಎಂದು ಏರ್‌ಲೈನ್ ಹೇಳಿಕೆಯಲ್ಲಿ ತಿಳಿಸಿದೆ.
ನಾವು ನಿರಂತರವಾಗಿ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುತ್ತಿದ್ದೇವೆ. ಟೆಲ್ ಅವೀವ್‌ಗೆ ಪ್ರಯಾಣಕ್ಕಾಗಿ ದೃಢೀಕೃತ ಬುಕಿಂಗ್ ಗಳ ನಮ್ಮ ಪ್ರಯಾಣಿಕರಿಗೆ ಸಂಪೂರ್ಣ ಮರುಪಾವತಿಯನ್ನು ನೀಡುತ್ತಿದ್ದೇವೆ. ನಮ್ಮ ಅತಿಥಿಗಳು ಮತ್ತು ಸಿಬ್ಬಂದಿಯ ಸುರಕ್ಷತೆಯು ನಮ್ಮ ಪ್ರಮುಖ ಆದ್ಯತೆಯಾಗಿದೆ ಎಂದು ತಿಳಿಸಿದೆ.
ಜುಲೈ 31 ರಂದು ಇರಾನ್‌ನಲ್ಲಿ ಇಸ್ರೇಲಿ ಪಡೆಗಳಿಂದ ಹಮಾಸ್ ರಾಜಕೀಯ ನಾಯಕ ಇಸ್ಮಾಯಿಲ್ ಹನಿಯೆಹ್ ಹತ್ಯೆಯಾದ ನಂತರ ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಹೆಚ್ಚಿದೆ.