
ನವದೆಹಲಿ: ಪ್ರಯಾಣಿಕರೊಬ್ಬರು ಏರ್ ಇಂಡಿಯಾ ವಿಮಾನದಲ್ಲಿಯೇ ಸಾವನ್ನಪ್ಪಿರುವ ಘಟನೆ ನಡೆದಿದೆ.
ದೆಹಲಿಯಿಂದ ಲಖನೌಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನದಲ್ಲಿ ಪ್ರಯಾಣಿಕ ಸಾವನ್ನಪ್ಪಿದ್ದಾರೆ. ಲಖನೌದ ಚೌಧರಿ ಚರಣ್ ಸಿಂಗ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ.
ಮೃತರನ್ನು ಬಿಹಾರದ ಗೋಪಾಲಗಂಜ್ ನ ಅಸಿಫುಲ್ಲಾ ಅನ್ಸಾರಿ (52) ಎಂದು ಗುರುತಿಸಲಾಗಿದೆ. ಬೆಳಿಗ್ಗೆ 8:10ಕ್ಕೆ ವಿಮನ ಲಖನೌದ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆದ ಬಳಿಕ ವಿಮಾನ ಸಿಬ್ಬಂದಿ ಅಸಿಫುಲ್ಲಾ ಜೊತೆ ಮಾತನಾಡಲು ಯತ್ನಿಸಿದ್ದಾರೆ. ಆದರೆ ಅವರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ವಿಮಾನದಲ್ಲಿದ್ದ ವೈದ್ಯರು ಅವರನ್ನು ಪರೀಕ್ಷಿಸಿದಾಗ ಅವರು ಸಾವನ್ನಪ್ಪಿರುವುದು ಗೊತ್ತಾಗಿದೆ. ವೈದ್ಯರು ಅಸಿಫುಲ್ಲಾ ಮೃತಪಟ್ಟಿದ್ದಾರೆ ಎಂದು ದೃಢಪಡಿಸಿದ್ದಾರೆ.
ವಿಮಾನ ಪ್ರಯಾಣದ ಮಧ್ಯೆಯೇ ಅಸಿಫುಲ್ಲಾ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಮರಣೋತ್ತರ ಪರೀಕ್ಷೆ ಬಳಿಕ ನಿಖರ ಕಾರಣ ತಿಳಿಯಲಿದೆ.