ಗಯಾ: ಉತ್ತರ ಭಾರತದ ಮದುವೆಯಲ್ಲಿ ವರ ಕುದುರೆಯೇರಿ ಮೆರವಣಿಗೆ ಬರುವುದು ಸಾಮಾನ್ಯವಾಗಿದೆ. ಇದು ಅಲ್ಲಿನ ಸಂಪ್ರದಾಯ ಕೂಡ ಹೌದು. ಆದರೆ ಇಲ್ಲೊಂದೆಡೆ ಪಿತೃಪ್ರಧಾನ ವ್ಯವಸ್ಥೆ, ಸಂಪ್ರದಾಯಕ್ಕೆ ಸವಾಲೆಸೆದ ವಧುವೊಬ್ಬಳು ತಾನೇ ಕುದುರೆಯೇರಿ ಬಂದಿರುವ ವಿಡಿಯೋ ವೈರಲ್ ಆಗಿದೆ.
ಹೌದು, ಬಿಹಾರದ ಗಯಾದಲ್ಲಿ ವಧು ತನ್ನ ಮದುವೆಯ ಸ್ಥಳಕ್ಕೆ ಕುದುರೆ ಸವಾರಿ ಮಾಡಿದ್ದಾಳೆ. ಇಂಡಿಗೋ ಏರ್‌ಲೈನ್ಸ್‌ನ ಹಿರಿಯ ಗಗನಸಖಿ ಅನುಷ್ಕಾ ಗುಹಾ ಅವರು, ಮಂಗಳವಾರ ತನ್ನ ಸಂಬಂಧಿಕರು ಮತ್ತು ಸ್ನೇಹಿತರೊಂದಿಗೆ ಕುದುರೆಯ ಮೇಲೆ ಸವಾರಿ ಮಾಡುತ್ತಾ ಮದುವೆಯ ಸ್ಥಳಕ್ಕೆ ಆಗಮಿಸಿದ್ದಾರೆ.
ಮದುವೆ ಮೆರವಣಿಗೆ ವೇಳೆ ಆಕರ್ಷಕ ಬ್ಯಾಂಡ್ ಗಳಿಗೆ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರ ಜೊತೆ, ಕುದುರೆಯೇರಿ ಕುಳಿತಿದ್ದ ವಧು ಕೂಡ ಸೊಂಟ ಬಳುಕಿಸಿದ್ದಾರೆ. ಬಿಳಿ ಲೆಹಂಗಾ ಧರಿಸಿದ ವಧು ಕೋಲ್ಕತ್ತಾ ಮೂಲದ ವರ ಜೀತ್ ಮುಖರ್ಜಿ ಮನೆಗೆ ತಲುಪಿದ್ದಾರೆ.
ಮದುವೆಗಳಲ್ಲಿ ವರ ಮಾತ್ರ ಏಕೆ ಕುದುರೆ ಸವಾರಿ ಮಾಡುತ್ತಾನೆ. ವಧು ಯಾಕೆ ಮಾಡಬಾರದು ಅನ್ನೋದು ಅನುಷ್ಕಾ ತನ್ನ ಬಾಲ್ಯದಿಂದಲೂ ಪ್ರಶ್ನಿಸುತ್ತಿದ್ದಳು. ತಾನು ಈ ಸಂಪ್ರದಾಯವನ್ನು ಮುರಿಯುವುದಾಗಿ ಈ ಹಿಂದಿನಿಂದಲೂ ಹೇಳಿಕೊಳ್ಳುತ್ತಿದ್ದಳಂತೆ. ಇದೀಗ ಶತಮಾನಗಳ ಸಂಪ್ರದಾಯಕ್ಕೆ ಅನುಷ್ಕಾ ತಿಲಾಂಜಲಿ ಇಟ್ಟಿದ್ದಾಳೆ.