ಏಪ್ರಿಲ್ ಒಂದರಿಂದ ಅನೇಕ ನಿಯಮಗಳಲ್ಲಿ ಬದಲಾವಣೆಯಾಗ್ತಿದೆ. ಕಾರಿನ ಸುರಕ್ಷತಾ ನಿಯಮಗಳಲ್ಲಿಯೂ ಬದಲಾವಣೆಯಾಗ್ತಿದೆ. ಕೇಂದ್ರ ಸರ್ಕಾರ, ಕಾರಿನ ಸುರಕ್ಷತಾ ಮಾನದಂಡದಲ್ಲಿ ಬದಲಾವಣೆ ಮಾಡಿದೆ. ಕಾರಿನ ಮುಂಭಾಗದ ಸೀಟು ಅಂದ್ರೆ ಡ್ರೈವರ್ ಮತ್ತು ಚಾಲಕನ ಪಕ್ಕದ ಸೀಟಿಗೆ ಏರ್ ಬ್ಯಾಗ್ ಕಡ್ಡಾಯವಾಗಲಿದೆ. ಏರ್‌ಬ್ಯಾಗ್‌ಗಳನ್ನು ಕಡ್ಡಾಯವಾಗಿ ಒದಗಿಸುವಂತೆ ಅಧಿಸೂಚನೆ ಹೊರಡಿಸಲಾಗಿದೆ.
ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ, ಹೊಸ ಕಾರುಗಳಲ್ಲಿ ಏರ್‌ಬ್ಯಾಗ್‌ಗಳನ್ನು ಕಡ್ಡಾಯಗೊಳಿಸಿದ ನಂತರ ಕಾರು ತಯಾರಕ ಕಂಪನಿಗಳಾದ ಮಾರುತಿ, ಮಹೀಂದ್ರಾ, ಟಾಟಾ, ಹ್ಯುಂಡೈ, ಕಿಯಾ, ರೆನಾಲ್ಟ್, ಹೋಂಡಾ, ಎಂಜಿ ಮೋಟಾರ್ಸ್ ಏರ್ ಬ್ಯಾಗ್ ಕಡ್ಡಾಯಗೊಳಿಸಿದೆ.
ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಪ್ರಕಾರ, ದೇಶದಲ್ಲಿ ಪ್ರತಿವರ್ಷ ಸುಮಾರು 80 ಸಾವಿರ ಜನರು ರಸ್ತೆ ಅಪಘಾತಗಳಲ್ಲಿ ಸಾವನ್ನಪ್ಪುತ್ತಿದ್ದಾರೆ. ಇದು ವಿಶ್ವದ ರಸ್ತೆ ಅಪಘಾತಗಳಲ್ಲಿ ಶೇಕಡಾ 13 ರಷ್ಟಿದೆ. ರಸ್ತೆ ಅಪಘಾತದಲ್ಲಿ ಸಾವಿಗೆ ಮುಖ್ಯ ಕಾರಣ ಕಾರುಗಳಲ್ಲಿ ಸುರಕ್ಷತಾ ಸೌಲಭ್ಯದ ಕೊರತೆ. ಈ ಕಾರಣದಿಂದಾಗಿ ಏಪ್ರಿಲ್ 1 ರಿಂದ ಹೊಸ ಕಾರುಗಳಲ್ಲಿ ಏರ್‌ಬ್ಯಾಗ್‌ಗಳನ್ನು ಕಡ್ಡಾಯಗೊಳಿಸಲಾಗಿದೆ. ಆಗಸ್ಟ್ ಒಂದರವರೆಗೆ ಬದಲಾವಣೆಗೆ ಅವಕಾಶ ನೀಡಲಾಗಿದೆ.
ಕಾರುಗಳಲ್ಲಿರುವ ಏರ್‌ಬ್ಯಾಗ್‌ಗಳನ್ನು ನೈಲಾನ್ ಬಟ್ಟೆಯಿಂದ ತಯಾರಿಸಲಾಗುತ್ತದೆ. ಕಾರಿನ ವಿವಿಧ ಸ್ಥಳಗಳಲ್ಲಿನ ಅಗತ್ಯಕ್ಕೆ ಅನುಗುಣವಾಗಿ ಇದನ್ನು ಅಳವಡಿಸಲಾಗುತ್ತದೆ. ಅಪಘಾತದ ಸಂದರ್ಭದಲ್ಲಿ ಇದು ರಕ್ಷಣೆ ನೀಡುತ್ತದೆ. ಹೊಸ ಕಾರುಗಳಿಗೆ ಏಪ್ರಿಲ್ 1ರಿಂದ ನಿಯಮ ಅನ್ವಯವಾಗಲಿದೆ. ಹಳೆ ಮಾಡೆಲ್ ಗಳಿಗೆ ಬದಲಾವಣೆ ಮಾಡಲು ಆಗಸ್ಟ್ ಒಂದರವರೆಗೆ ಅವಕಾಶ ನೀಡಲಾಗಿದೆ.