ಕಲಬುರ್ಗಿ: ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ವಿರುದ್ಧ ಕಿಡ್ನ್ಯಾಪ್ ಆರೋಪ ಕೇಳಿಬಂದಿದೆ. ಚಿಂಚೋಳಿ ತಾಲೂಕಿನ ಐನೊಳ್ಳಿ ಗ್ರಮ ಪಂಚಾಯಿತಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಈ ಘಟನೆ ನಡೆದಿದೆ.
ಬಿಜೆಪಿ ಬೆಂಬಲಿತ ನಾಲ್ವರು ಸದಸ್ಯರನ್ನು ಕಾಂಗ್ರೆಸ್ ಕಾರ್ಯಕರ್ತರು ಅಪಹರಣ ಮಾಡಿದ್ದಾರೆ ಎಂದು ಆರೋಪಿಸಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಜುಲೈ 13ರಂದು ಒಟ್ಟು 11 ಗ್ರಾಮ ಪಂಚಾಯಿತಿ ಸದಸ್ಯರು ಮಹಾರಾಷ್ಟ್ರದ ಪುಣೆಗೆ ಪ್ರವಾಸಕ್ಕೆ ಹೋಗಿದ್ದರು. ಅಲ್ಲಿ ಖಾಸಗಿ ಹೋಟೆಲ್ ನಲ್ಲಿ ವಾಸ್ತವ್ಯ ಹೂಡಿದ್ದರು. ಈ ವೇಳೆ ನಾಲ್ವರು ಸದಸ್ಯರನ್ನು ಕಿಡ್ನ್ಯಾಪ್ ಮಾಡಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಕಾಂಗ್ರೆಸ್ ಕಾರ್ಯಕರ್ತರ ವಿರುದ್ಧ ಅಪಹರಣ ಆರೋಪದ ಮೇಲೆ ಪುಣೆಯ ಚಿಕ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
18 ಸದಸ್ಯರನ್ನು ಒಳಗೊಂಡಿರುವ ಐನೊಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಆ.7ರಂದು ಚುನಾವಣೆ ನಡೆಯಲಿದೆ. ಅಧ್ಯಕ್ಷ ಸ್ಥಾನಕ್ಕೆ ಇಬ್ಬರು ಪರಿಶಿಷ್ಟ ಮಹಿಳೆಯರ ನಡುವೆ ಜಿದ್ದಾಜಿದ್ದಿ ಏರ್ಪಟ್ಟಿದ್ದು, ಅಧ್ಯಕ್ಷ ಸ್ಥಾನಕ್ಕೆ 10 ಸದಸ್ಯರ ಬೆಂಬಲ ಬೇಕು. ಈಗಾಗಲೇ ಬಿಜೆಪಿ ಬೆಂಬಲಿತ 11 ಸದಸ್ಯರು ಪ್ರವಾಸಕ್ಕೆ ತೆರಳಿದ್ದು, ಅವರಲ್ಲಿ ನಾಲ್ವರು ಕಿಡ್ನ್ಯಾಪ್ ಆಗಿದ್ದಾರೆ ಎಂಬ ಆರೊಪ ಕೇಳಿಬಂದಿದೆ.