ನವದೆಹಲಿ: ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್(ಎಐಎಂಐಎಂ) ನಾಯಕ, ಸಂಸದ ಅಸಾದುದ್ದೀನ್ ಓವೈಸಿ ಅವರ ಮನೆ ಮೇಲೆ ದುಷ್ಕರ್ಮಿಗಳು ದಾಳಿ ಮಾಡಿ ಕಲ್ಲು ತೂರಾಟ ನಡೆಸಿದ್ದಾರೆ.
ಭಾನುವಾರ ರಾತ್ರಿ ರಾಜಧಾನಿಯಲ್ಲಿರುವ ಅವರ ಮನೆಯ ಕಿಟಕಿಗಳನ್ನು ಒಡೆದ ಅಪರಿಚಿತ ವ್ಯಕ್ತಿಗಳು ದಾಳಿ ಮಾಡಿದ್ದಾರೆ ಎಂದು ಹೇಳಲಾಗಿದೆ.
ಎಐಎಂಐಎಂ ಮುಖ್ಯಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದು, ಅಪರಿಚಿತ ಪುಂಡರು ತಮ್ಮ ದೆಹಲಿಯ ಮನೆಗೆ ಕಲ್ಲು ಎಸೆದಿದ್ದಾರೆ ಎಂದು ಹೇಳಿದ್ದಾರೆ.
ಸಂಜೆ 5.30ರ ಸುಮಾರಿಗೆ ಅಶೋಕ ರಸ್ತೆಯಲ್ಲಿರುವ ಎಐಎಂಐಎಂ ಮುಖ್ಯಸ್ಥರ ದೆಹಲಿಯ ಮನೆಯಲ್ಲಿ ಈ ಘಟನೆ ನಡೆದಿದೆ. ಮಾಹಿತಿ ಪಡೆದ ನಂತರ, ಹೆಚ್ಚುವರಿ ಡಿಸಿಪಿ ನೇತೃತ್ವದಲ್ಲಿ ದೆಹಲಿ ಪೊಲೀಸರ ತಂಡವು ಅವರ ಮನೆಗೆ ತೆರಳಿ ಅಲ್ಲಿ ಸಾಕ್ಷ್ಯಗಳನ್ನು ಸಂಗ್ರಹಿಸಿದೆ.
ದುಷ್ಕರ್ಮಿಗಳ ಗುಂಪೊಂದು ತಮ್ಮ ನಿವಾಸದ ಮೇಲೆ ಕಲ್ಲು ತೂರಾಟ ನಡೆಸಿದ್ದು, ಕಿಟಕಿ ಗಾಜುಗಳನ್ನು ಹಾನಿಗೊಳಿಸಿದೆ ಎಂದು ಸಂಸತ್ ಸ್ಟ್ರೀಟ್ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ಓವೈಸಿ ಆರೋಪಿಸಿದ್ದಾರೆ.
ಇಂತಹ ದಾಳಿ ನಡೆದಿರುವುದು ಇದು ನಾಲ್ಕನೇ ಬಾರಿ, ನನ್ನ ಮನೆಯ ಸುತ್ತಮುತ್ತಲಿನ ಪ್ರದೇಶದಲ್ಲಿ ಸಾಕಷ್ಟು ಸಿಸಿಟಿವಿ ಕ್ಯಾಮೆರಾಗಳಿದ್ದು, ತಪ್ಪಿತಸ್ಥರನ್ನು ತಕ್ಷಣವೇ ಬಂಧಿಸಬೇಕು ಎಂದು ಒತ್ತಾಯಿಸಿದ್ದಾರೆ.