ನವದೆಹಲಿ: ಅಯೋಧ್ಯೆಯಲ್ಲಿ ನಾಳೆ ಜನವರಿ 22ರಂದು ಭವ್ಯವಾದ ರಾಮ ಮಂದಿರ ಉದ್ಘಾಟನೆ ಹಾಗೂ ರಾಮಲಲ್ಲಾ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ನೆರವೇರಲಿದ್ದು, ದೇಶದ ವಿವಿಧ ರಾಜ್ಯಗಳು, ಸಂಸ್ಥೆಗಳು, ಶಾಲಾ-ಕಾಲೇಜುಗಳು ರಜೆ ಘೋಷಣೆ ಮಾಡಿವೆ. ಈ ನಡುವೆ ಆಲ್ ಇಂಡಿಯಾ ಇನ್ ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ – ಏಮ್ಸ್ ಕೂಡ ರಜೆ ಘೋಷಿಸಿತ್ತು. ಆದರೆ ಕೊನೇ ಕ್ಷಣದಲ್ಲಿ ರಜೆ ಹಿಂಪಡೆದಿದೆ.
ಜನವರಿ 22ರಂದು ಅಯೋಧ್ಯೆಯಲ್ಲಿ ಮಧ್ಯಾಹ್ನ 12:20ಕ್ಕೆ ರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನೆ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಮಧ್ಯಾಹ್ನ 2:30ವರೆಗೆ ಒಪಿಡಿ ಸೇವೆ ಬಂದ್ ಮಾಡಲಾಗುವುದು ಎಂದು ಏಮ್ಸ್ ತಿಳಿಸಿತ್ತು.
ಏಮ್ಸ್ ನಿರ್ಧಾರಕ್ಕೆ ಸಾಕಷ್ಟು ಆಕ್ಷೇಪಗಳು ವ್ಯಕ್ತವಾಗಿದ್ದವು. ಇದರಿಂದ ರೋಗಿಗಳಿಗೆ ಸಮಸ್ಯೆಯಾಗಲಿದೆ ಎಂಬ ಆರೋಪ ಕೇಳಿಬಂದಿತ್ತು. ಇದರ ಬೆನ್ನಲ್ಲೇ ಇದೀಗ ನಾಳೆ ಘೋಷಿಸಿದ್ದ ರಜೆಯನ್ನು ಏಮ್ಸ್ ಹಿಂಪಡೆದಿದೆ. ನಾಳೆಯೂ ಒಪಿಡಿ ಸೇವೆ ಇರಲಿದ್ದು, ಎಂದಿನಂತೆ ದಿನವಿಡಿ ಏಮ್ಸ್ ಆಸ್ಪತ್ರೆ ತೆರೆದಿರಲಿದೆ ಎಂದು ಸ್ಪಷ್ಟಪಡಿಸಿದೆ.