ಎರಡು ವರ್ಷದಿಂದ 18 ವರ್ಷದೊಳಗಿನ ಮಕ್ಕಳಿಗೆ ಅಭಿವೃದ್ಧಿಪಡಿಸಲಾದ ಕೋವ್ಯಾಕ್ಸಿನ್ ಲಸಿಕೆಯ ಅವತರಣಿಕೆಯ ಪ್ರಯೋಗಕ್ಕಾಗಿ ಮಕ್ಕಳನ್ನು ಸ್ಕ್ರೀನಿಂಗ್ ಮಾಡಲು ಅಖಿಲ ಭಾರತೀಯ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್) ಆರಂಭಿಸಿದೆ.
ಏಮ್ಸ್ ಪಟನಾದ ಶಾಖೆಯಲ್ಲಿ ಮಕ್ಕಳ ಮೇಲೆ ಲಸಿಕೆಯ ಪ್ರಯೋಗ ಅದಾಗಲೇ ಆರಂಭಗೊಂಡಿದ್ದು, ಭಾರತ್ ಬಯೋಟೆಕ್ ದೇಶೀಯವಾಗಿ ಅಭಿವೃದ್ಧಿಪಡಿಸಿದ ಈ ಲಸಿಕೆ ಮಕ್ಕಳಿಗೆ ಸೂಕ್ತವಾಗಿದೆಯೇ ಎಂದು ಪರೀಕ್ಷಿಸಲಾಗುತ್ತಿದೆ.
ಮಕ್ಕಳ ಸ್ಕ್ರೀನಿಂಗ್ ವರದಿ ಬಂದ ಕೂಡಲೇ ಅವರಿಗೆ ಲಸಿಕೆ ನೀಡಲಾಗುವುದು. ಆರೋಗ್ಯಯುತವಾದ 525 ಅಭ್ಯರ್ಥಿಗಳ ಮೇಲೆ ಈ ಪ್ರಯೋಗ ಮಾಡಲಾಗುವುದು. ಅಂತರ್ಸ್ನಾಯು ಮಾರ್ಗದಲ್ಲಿ ಲಸಿಕೆಯ ಎರಡು ಡೋಸ್‌ಗಳನ್ನು ಕ್ರಮವಾಗಿ ಮೊದಲನೇ ಹಾಗೂ 28ನೇ ದಿನ ನೀಡಲಾಗುವುದು.
2-18 ವರ್ಷ ವಯಸ್ಸಿನೊಳಗಿನ ಮಕ್ಕಳಲ್ಲಿ ಲಸಿಕೆಯ ಪ್ರಯೋಗವನ್ನು ಮಕ್ಕಳಲ್ಲಿ ಮಾಡಲು ಭಾರತೀಯ ಮದ್ದು ನಿಯಂತ್ರಣ ಪ್ರಾಧಿಕಾರ ಮೇ 12ರಂದು ಅನುಮತಿ ಕೊಟ್ಟಿದೆ.
ಕೋವಿಡ್ ಮೂರನೇ ಅಲೆ ಸಂದರ್ಭದಲ್ಲಿ ಮಕ್ಕಳ ಮೇಲೆ ಪ್ರಭಾವ ಹೆಚ್ಚು ಎಂಬ ವರದಿಗಳು ಬಲ ಪಡೆಯುತ್ತಿರುವ ಹಿನ್ನೆಲೆಯಲ್ಲಿ, ನೀತಿ ಆಯೋಗದ ಆರೋಗ್ಯ ಸಲಹೆಗಾರರಾದ ವಿ.ಕೆ. ಪೌಲ್ ನೇತೃತ್ವದಲ್ಲಿ ಸಮಿತಿಯು ಸಭೆ ಸೇರಿದ್ದು, ಮುಂದಿನ ದಿನಗಳಲ್ಲಿ ಸಾಂಕ್ರಮಿಕವನ್ನು ಹೇಗೆ ಎದುರಿಸಬೇಕೆಂಬ ನಿಟ್ಟಿನಲ್ಲಿ ಸಂವಹನ ನಡೆಯುತ್ತಿದೆ.