ಬೆಂಗಳೂರು: ಅನುದಾನಿತ ಶಿಕ್ಷಣ ಸಂಸ್ಥೆಗಳ ಶಿಕ್ಷಕರ ಬೇಡಿಕೆಗೆ ಸರ್ಕಾರ ಸ್ಪಂದಿಸಿದ್ದು, ವೇತನ ತಾರತಮ್ಯ ನಿವಾರಣೆಗೆ ಸಮಿತಿ ರಚಿಸಲಾಗಿದೆ.
ಅನುದಾನಿತ ಶಿಕ್ಷಣ ಸಂಸ್ಥೆಗಳ ಶಿಕ್ಷಕರು, ಸಿಬ್ಬಂದಿಗಳ ದಶಕಗಳ ಹೋರಾಟಕ್ಕೆ ರಾಜ್ಯ ಸರ್ಕಾರ ಸ್ಪಂದಿಸಿದ್ದು, ವೇತನ ಭತ್ಯೆ ತಾರತಮ್ಯ ಸರಿಪಡಿಸಲು ಅಗತ್ಯವಾದ ಆರ್ಥಿಕ ವೆಚ್ಚಗಳನ್ನು ಅಂದಾಜಿಸಲು ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿಗಳ ನೇತೃತ್ವದಲ್ಲಿ ಸಮಿತಿ ರಚಿಸಿ ಆದೇಶ ಹೊರಡಿಸಲಾಗಿದೆ.
ಜನವರಿ 20ರಂದು ಶಿಕ್ಷಣ ಇಲಾಖೆ ಸಚಿವರು, ಹಿರಿಯ ಅಧಿಕಾರಿಗಳ ಸಭೆ ನಡೆದಿದ್ದು, ಈ ಸಭೆಯಲ್ಲಿ ಅನುದಾನಿತ ಶಿಕ್ಷಣ ಸಂಸ್ಥೆಗಳ ಶಿಕ್ಷಕರ ಬೇಡಿಕೆ ಕುರಿತಾಗಿ ವಿಸ್ತೃತ ಚರ್ಚೆ ನಡೆಸಿ ಬೇಡಿಕೆ ಈಡೇರಿಸಲು ಕ್ರಮ ಕೈಗೊಳ್ಳಲಾಗಿದೆ.
ಮುಂದಿನ ಬಜೆಟ್ ನಲ್ಲಿ ಅನುದಾನಿತ ಶಿಕ್ಷಣ ಸಂಸ್ಥೆಗಳ ಸಿಬ್ಬಂದಿ ವೇತನ ಮತ್ತು ಭತ್ಯೆಗಳ ತಾರತಮ್ಯಕ್ಕೆ ಮುಕ್ತಿ ದೊರೆಯುವ ಸಾಧ್ಯತೆ ಇದೆ. ಅನುದಾನಿತ ಶಿಕ್ಷಣ ಸಂಸ್ಥೆಗಳ ಸಿಬ್ಬಂದಿಗೆ ಅನುದಾನಿತ ರಹಿತ ಸೇವೆಯನ್ನು ಪರಿಗಣಿಸಿ ಕಾಲ್ಪನಿಕ ವೇತನ ಬಡ್ತಿ ಜಾರಿ, ಪಿಂಚಣಿ ಯೋಜನೆ, ಜ್ಯೋತಿ ಸಂಜೀವಿನಿ ಯೋಜನೆ ಮೊದಲಾದ ಸೌಲಭ್ಯ ಅನುಷ್ಠಾನಗೊಳಿಸುವ ಕುರಿತಂತೆ ದತ್ತಾಂಶ ಕ್ರೂಢೀಕರಿಸಿ 30 ದಿನಗಳಲ್ಲಿ ವರದಿ ಸಲ್ಲಿಸಲು ಸಮಿತಿಗೆ ತಿಳಿಸಲಾಗಿದೆ.