ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿಗೆ ಬಿಗ್ ಶಾಕ್ ಎದುರಾಗಿದೆ. ದಕ್ಷಿಣ ಭಾರತದಲ್ಲಿ ತನ್ನ ವಿಜಯಪತಾಕೆ ಹಾರಿಸಲು ಇತ್ತೀಚೆಗಷ್ಟೇ ಕರ್ನಾಟಕದಲ್ಲಿ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡಿದ್ದ ಬಿಜೆಪಿ, ಈಗ ತಮಿಳುನಾಡಿನಲ್ಲಿ ನಡೆದ ವಿದ್ಯಮಾನದಿಂದಾಗಿ ಹಿನ್ನಡೆ ಅನುಭವಿಸಿದೆ.
ಬಿಜೆಪಿ ಮಿತ್ರ ಪಕ್ಷವಾಗಿದ್ದ ಎಐಎಡಿಎಂಕೆ, ಚೆನ್ನೈನಲ್ಲಿ ಇಂದು ನಡೆದ ಮಹತ್ವದ ಸಭೆಯಲ್ಲಿ ಬಿಜೆಪಿ ಹಾಗೂ ಎನ್ ಡಿ ಎ ಕೂಟದೊಂದಿಗೆ ತನ್ನ ಮೈತ್ರಿ ಕಡಿದುಕೊಳ್ಳಲು ಒಕ್ಕೊರಲಿನ ತೀರ್ಮಾನ ಕೈಗೊಂಡಿದೆ. ಅಲ್ಲದೆ ತಮಿಳುನಾಡು ಬಿಜೆಪಿ ಘಟಕದ ಅಧ್ಯಕ್ಷ ಅಣ್ಣಾಮಲೈ, ದ್ರಾವಿಡಿಯನ್ ನೇತಾರ ಸಿ ಎನ್ ಅಣ್ಣಾದೊರೈ ಕುರಿತಂತೆ ನೀಡಿದ್ದ ಹೇಳಿಕೆಯನ್ನು ಖಂಡಿಸಿ ನಿರ್ಣಯವನ್ನು ಕೈಗೊಂಡಿದೆ.
ಬಿಜೆಪಿಗೆ ದಕ್ಷಿಣ ಭಾರತದಲ್ಲಿ ಈ ಮೊದಲಿನಿಂದಲೂ ಹಿನ್ನಡೆಯಾಗುತ್ತಾ ಬಂದಿದ್ದು, ಕರ್ನಾಟಕದಲ್ಲಿ ಮಾತ್ರ ಅಧಿಕಾರ ಹಿಡಿಯಲು ಸಾಧ್ಯವಾಗಿತ್ತು. ಇತ್ತೀಚೆಗ ನಡೆದ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲೂ ಬಿಜೆಪಿ ತೀರಾ ಕಳಪೆ ಪ್ರದರ್ಶನ ನೀಡಿದೆ. ಹೀಗಾಗಿ ಲೋಕಸಭಾ ಚುನಾವಣೆ ಸಲುವಾಗಿ ಜೆಡಿಎಸ್ ಜೊತೆ ಕರ್ನಾಟಕದಲ್ಲಿ ಮೈತ್ರಿ ಮಾಡಿಕೊಂಡಿದ್ದರ ಮಧ್ಯೆ, ಇದೀಗ ತಮಿಳುನಾಡಿನಲ್ಲಿ ಮಿತ್ರ ಪಕ್ಷವಾಗಿದ್ದ ಎಐಎಡಿಎಂಕೆ ಮೈತ್ರಿಕೂಟದಿಂದ ಹೊರ ನಡೆದಿದೆ.