ಬೆಂಗಳೂರು: ಸರ್ಕಾರಿ ಕಚೇರಿಗಳಿಗೆ ತಡವಾಗಿ ಆಗಮಿಸುವ ಮತ್ತು ಬೇಗನೆ ಹೋಗುವ ನೌಕರರು, ಅಧಿಕಾರಿಗಳು, ಸಿಬ್ಬಂದಿಗೆ ಚಾಟೆ ಬೀಸಲು ರಾಜ್ಯ ಸರ್ಕಾರ ಮುಂದಾಗಿದ್ದು, ಇದೇ ಮೊದಲ ಬಾರಿಗೆ ಕೃತಕ ಬುದ್ಧಿಮತ್ತೆ ಆಧಾರಿತ ಹಾಜರಾತಿ ವ್ಯವಸ್ಥೆ ಜಾರಿಗೆ ಮುಂದಾಗಿದೆ.
ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಇ- ಆಡಳಿತ ವತಿಯಿಂದ ಕರ್ನಾಟಕ ಹಾಜರಾತಿ ನಿರ್ವಹಣಾ ವ್ಯವಸ್ಥೆ ಅಭಿವೃದ್ಧಿಪಡಿಸಿದ್ದು, ಇದನ್ನು ವಿಸ್ತರಿಸಲು ಮುಂದಾಗಿದೆ. ಈ ಮೂಲಕ ಸರ್ಕಾರಿ ಕಚೇರಿಗಳಿಗೆ ತಡವಾಗಿ ಬರುವ ನೌಕರರಿಗೆ ಬಿಸಿ ಮುಟ್ಟಿಸಲು ಮುಂದಾಗಿದೆ.
ಈ ಮೊದಲು ಸರ್ಕಾರಿ ಕಚೇರಿಗಳಲ್ಲಿ ಹಾಜರಾತಿ ಪುಸ್ತಕಕ್ಕೆ ಸಹಿ ಮಾಡುವ ಮೂಲಕ ನೌಕರರ ಹಾಜರಾತಿ ದಾಖಲಾಗುತ್ತಿತ್ತು. ನಂತರ ಬಯೋಮೆಟ್ರಿಕ್ ವ್ಯವಸ್ಥೆ ಜಾರಿಗೆ ಬಂದಿತು. ಇದರಲ್ಲಿ ನೌಕರರು ತಮ್ಮ ಬೆರಳಚ್ಚು ನೀಡಬೇಕಿತ್ತು. ಈ ವ್ಯವಸ್ಥೆಯಲ್ಲಿ ನೌಕರರು ಕಚೇರಿಗೆ ಆಗಮಿಸಿದ ಸಮಯ ಸಿಗುತ್ತಿತ್ತು. ಕೆಲವು ಕಚೇರಿಗಳಲ್ಲಿ ಬಯೋಮೆಟ್ರಿಕ್ ಯಂತ್ರಗಳನ್ನು ಹಾಳು ಮಾಡಿ, ದುರಸ್ತಿ ನೆಪ ಹೇಳಿ ಹಾಜರಾತಿ ಪುಸ್ತಕಕ್ಕೆ ಸಹಿ ಹಾಕುತ್ತಿದ್ದರು.
ಇದೀಗ ಎಐ ಆಧಾರಿತ ಹಾಜರಾತಿ ವ್ಯವಸ್ಥೆಗೆ ಸರ್ಕಾರ ಮುಂದಾಗಿದೆ. ಹೊಸ ತಂತ್ರಾಂಶದಲ್ಲಿ ನೌಕರರ ಜಿಪಿಎಸ್ ಟ್ರಾಕಿಂಗ್ ವ್ಯವಸ್ಥೆಯೊಂದಿಗೆ ಸಿಬ್ಬಂದಿಯ ಫೋಟೋ ಕೂಡ ಚಿತ್ರೀಕರಣಗೊಳ್ಳಲಿದ್ದು, ನೌಕರ ಯಾವ ಸ್ಥಳದಲ್ಲಿದ್ದಾರೆ ಎನ್ನುವ ಖಚಿತ ಮಾಹಿತಿ ಗೊತ್ತಾಗಲಿದೆ. ಈಗಾಗಲೇ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಪ್ರಾಯೋಗಿಕವಾಗಿ ಜಾರಿಗೆ ತರಲಾಗಿದ್ದು, ಸಾಧಕ ಬಾಧಕ ಪರಿಶೀಲಿಸಿ ಎಲ್ಲಾ ಸರ್ಕಾರಿ ಕಚೇರಿಗಳಿಗೆ ವಿಸ್ತರಿಸುವ ಸಾಧ್ಯತೆ ಇದೆ ಎನ್ನಲಾಗಿದೆ.