ಅಹಮದಾಬಾದ್: ಗುಜರಾತ್ ನ ಅಹಮದಾಬಾದ್ ನಲ್ಲಿ ನಡೆದ ಆಘಾತಕಾರಿ ಘಟನೆಯೊಂದರಲ್ಲಿ 39 ವರ್ಷದ ಮಹಿಳೆ ಗಂಡನ ಅಸ್ವಾಭಾವಿಕ ಲೈಂಗಿಕ ಕ್ರಿಯೆಯಿಂದ ರೋಸಿಹೋಗಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಅಹಮದಾಬಾದ್ ನಗರದ ಘಟ್ಲೋಡಿಯಾ ನಿವಾಸಿಯಾಗಿರುವ ಮಹಿಳೆ 2020 ರ ಆಗಸ್ಟ್ ನಲ್ಲಿ ಮ್ಯಾಟ್ರಿಮೋನಿಯಲ್ ಪೋರ್ಟಲ್ ಮೂಲಕ ಪರಿಚಿತರಾಗಿ ಸಂಪರ್ಕಕ್ಕೆ ಬಂದು ಮದುವೆಯಾಗಿದ್ದು, ಪತಿ ನಡವಳಿಕೆ ಅತಿರೇಕದಿಂದ ಕೂಡಿತ್ತು.
ವೈದ್ಯನಾಗಿದ್ದ ಆಕೆಯ ಗಂಡ ಪ್ರತಿದಿನ ನಿದ್ರಾಜನಕ ಮಾತ್ರೆಗಳನ್ನು ಕೊಡುತ್ತಿದ್ದ. ಅಲ್ಲದೇ, ಬಲವಂತವಾಗಿ ಪತ್ನಿಯೊಂದಿಗೆ ಲೈಂಗಿಕ ಕ್ರಿಯೆ ನಡೆಸುತ್ತಿದ್ದ. ಅಸ್ವಾಭಾವಿಕ ಲೈಂಗಿಕ ಕ್ರಿಯೆಗೂ ಬಲವಂತ ಮಾಡುತ್ತಿದ್ದ. ಪ್ರತಿದಿನ ಗಂಡನ ಕಾಟದಿಂದ ರೋಸಿಹೋದ ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮೃತಪಟ್ಟ ಮಹಿಳೆ 18 ಪುಟಗಳ ಡೆತ್ ನೋಟ್ ನಲ್ಲಿ ಪತಿಯ ವಿಕೃತಿಯ ಬಗ್ಗೆ ಆರೋಪ ಮಾಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.