ಸಾಮಾಜಿಕ ಜಾಲತಾಣ ವಾಟ್ಸಾಪ್ನಲ್ಲಿ ಬಂದ ವದಂತಿಯೊಂದನ್ನು ನಂಬಿ ದ್ವಿಚಕ್ರ ಹಾಗೂ ನಾಲ್ಕು ಚಕ್ರ ವಾಹನಗಳ ಚಾಲಕರು ಪೆಟ್ರೋಲ್ ಬಂಕ್ ಗಳ ಮುಂದೆ ತಡರಾತ್ರಿ ಸಾಲುಗಟ್ಟಿ ನಿಂತ ಘಟನೆ ಗುಜರಾತಿನ ಅಹಮದಾಬಾದ್ ನಲ್ಲಿ ನಡೆದಿದೆ.
ವಾಟ್ಸಾಪ್ ಸಂದೇಶದಲ್ಲಿ ಭಾನುವಾರದಿಂದ ಪೆಟ್ರೋಲ್ ಬಂಕ್ ಮಾಲೀಕರ ಮುಷ್ಕರ ಆರಂಭವಾಗಲಿದೆ. ಇದರ ಜೊತೆಗೆ ಸೌದಿಅರೇಬಿಯಾ ಸಹ ಭಾರತಕ್ಕೆ ತೈಲ ಸರಬರಾಜನ್ನು ಸ್ಥಗಿತಗೊಳಿಸಿದೆ ಎಂಬ ಮಾಹಿತಿ ನೀಡಲಾಗಿತ್ತು. ಇದನ್ನು ನಂಬಿದ ಜನ ತಮ್ಮ ವಾಹನಗಳಲ್ಲಿ ಪೆಟ್ರೋಲ್ ಬಂಕ್ ಗಳಿಗೆ ದೌಡಾಯಿಸಿದರು.
ಪೆಟ್ರೋಲ್ ಹಾಗೂ ಡೀಸೆಲ್ ನ್ನು ಟ್ಯಾಂಕ್ ಪೂರ್ತಿ ಮಾಡಿಕೊಳ್ಳಬೇಕೆಂಬ ಕಾರಣಕ್ಕೆ ವಾಹನ ಸವಾರರು ತಡರಾತ್ರಿಯವರೆಗೆ ಸಾಲುಗಟ್ಟಿ ನಿಂತಿದ್ದರು. ಪೆಟ್ರೋಲ್ ಬಂಕ್ ಮಾಲೀಕರ ಮುಷ್ಕರ ಇಲ್ಲ. ಸೌದಿ ಅರೇಬಿಯಾ ಇಂಧನ ಸರಬರಾಜನ್ನು ನಿಲ್ಲಿಸಿಲ್ಲ ಎಂದು ಹೇಳಿದರೂ ಸಹ ಜನ ಕೇಳುವ ಸ್ಥಿತಿಯಲ್ಲಿರಲಿಲ್ಲ.
ಅಹ್ಮದಾಬಾದ್ ನಲ್ಲಿ ಸಾಮಾನ್ಯವಾಗಿ 11ಗಂಟೆಯವರೆಗೆ ಪೆಟ್ರೋಲ್ ಬಂಕ್ ಕಾರ್ಯನಿರ್ವಹಿಸುತ್ತಿದ್ದು, ಶನಿವಾರ ಮಾತ್ರ ತಡರಾತ್ರಿಯವರೆಗೂ ಜನಸಂದಣಿಯಿಂದ ಕೂಡಿತ್ತು. ಈ ದೃಶ್ಯದ ವಿಡಿಯೋಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.