ರಸ್ತೆ ಅಫಘಾತದಲ್ಲಿ ಮೃತಪಟ್ಟ ತನ್ನ ಪುತ್ರನ ವಿರುದ್ಧವೇ ಎಫ್‌ಐಆರ್ ದಾಖಲಿಸಿರುವ ತಂದೆ, ನಿರ್ಲಕ್ಷ್ಯದ ಚಾಲನೆಯೇ ತನ್ನ ಮಗನ ಸಾವಿಗೆ ಕಾರಣ ಎಂದು ದೂರಿದ್ದಾರೆ.
63 ವರ್ಷ ವಯಸ್ಸಿನ ನಾರಾಯಣ್ ಚೌಹಾಣ್ ತಮ್ಮ ಪುತ್ರ ಬಹಳ ಬೇಜವಾಬ್ದಾರಿಯಿಂದ ಚಾಲನೆ ಮಾಡಿ ತನ್ನ ಸಾವನ್ನು ತಾನೇ ತಂದುಕೊಂಡಿದ್ದಾನೆ ಎಂದು ಆಪಾದಿಸಿದ್ದಾರೆ. ಐಪಿಸಿಯ ವಿವಿಧ ವಿಧಿಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.
ತನ್ನ ಪುತ್ರ ಹಳೆಯ ಸ್ಪೋರ್ಟ್ಸ್ ಬೈಕೊಂದನ್ನು ಖರೀದಿ ಮಾಡಿದ್ದು, ಆತನನ್ನು ಸಿಂಧೂ ಭವನ ರಸ್ತೆಗೆ ಬರುವಂತೆ ಸ್ನೇಹಿತರು ಕರೆದಾಗ, ಈತ ಅಲ್ಲಿಗೆ ಹೋಗುವ ವೇಳೆ ರಸ್ತೆ ಅಪಘಾತಕ್ಕೆ ಬಲಿಯಾಗಿದ್ದಾನೆ ಎನ್ನುತ್ತಾರೆ ಚೌಹಾಣ್.
ಅಪಘಾತ ಸ್ಥಳಕ್ಕೆ ಚೌಹಾಣ್ ಭೇಟಿ ನೀಡಿದ ವೇಳೆ ತಮ್ಮ ಮಗ ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಣ್ಣಿಗೆ ಬಿದ್ದಿದೆ. ಇದೇ ವೇಳೆ ಆತನ ಬೈಕ್ ಕೂಡಾ ಜಖಂ ಆಗಿತ್ತು.
ಘಟನಾ ಸ್ಥಳದಲ್ಲಿದ್ದ ವ್ಯಕ್ತಿಯೊಬ್ಬರು ತಮ್ಮ ಪುತ್ರನ ನಿರ್ಲಕ್ಷ್ಯದ ಚಾಲನೆಯೇ ಆಪಘಾತಕ್ಕೆ ಕಾರಣವಾಗಿದ್ದು, ಡಿವೈಡರ್‌ಗೆ ಗುದ್ದಿದ ಬೈಕ್ ಬಳಿಕ ವಿದ್ಯುತ್ ಕಂಬವೊಂದಕ್ಕೆ ಢಿಕ್ಕಿ ಹೊಡೆದಿದೆ ಎನ್ನುತ್ತಾರೆ. ಆಸ್ಪತ್ರೆಗೆ ಹೋಗುವ ಮುನ್ನವೇ ಮುಖೇಶ್ ಪ್ರಾಣ ಹೋಗಿದೆ ಎಂದು ವೈದ್ಯರು ಘೋಷಿಸಿದ್ದಾರೆ.
ಇಂಥದ್ದೇ ಮತ್ತೊಂದು ಘಟನೆಯಲ್ಲಿ ನಾಡಿಯಾಡ್‌ನಲ್ಲಿ ತಾಯಿಯೊಬ್ಬರು ತಮ್ಮ ಪುತ್ರನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ತನ್ನ ಮಗನ ಬೇಜವಾಬ್ದಾರಿ ಚಾಲನೆಯಿಂದಾಗಿ ಆತನ ಬೈಕ್ ಸ್ಕಿಡ್ ಆಗಿ ಮಹಿಳೆಯೊಬ್ಬರಿಗೆ ಗುದ್ದಿ ಅವರನ್ನು ಗಾಯಗೊಳಿಸಿದ್ದು, ಅದಕ್ಕೆ ಆತನೇ ಹೊಣೆ ಎಂದು ಖುದ್ದು ತಾಯಿಯೇ ಮಗನ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.
ನಿಧಾನವಾಗಿ ಚಲಿಸಲು ಪದೇ ಪದೇ ಹೇಳಿದರೂ ತನ್ನ ಮಗ ತನ್ನ ಮಾತನ್ನು ಕೇಳಲಿಲ್ಲ ಎಂಬ ಸಿಟ್ಟಿನಲ್ಲಿ ತಾಯಿ ಹೀಗೆ ಮಾಡಿದ್ದಾರೆ.