ಕೊಲ್ಕತ್ತಾ: ಇಂದು ನಡೆದ ಮಹತ್ವದ ರಾಜಕೀಯ ಬೆಳವಣಿಗೆಯಲ್ಲಿ ಬಿಜೆಪಿಯ ಮಾಜಿ ಹಿರಿಯ ನಾಯಕ ಯಶವಂತ್ ಸಿನ್ಹಾ ತೃಣಮೂಲ ಕಾಂಗ್ರೆಸ್ ಸೇರ್ಪಡೆ ಆಗಿದ್ದಾರೆ.
2018 ರ ಏಪ್ರಿಲ್ 21 ರಂದು ಅವರು ಬಿಜೆಪಿಯನ್ನು ತೊರೆದಿದ್ದರು. ಕೇಂದ್ರದ ಮಾಜಿ ಹಣಕಾಸು ಸಚಿವರು ಆಗಿರುವ ಯಶವಂತ್ ಸಿನ್ಹಾ, ದೇಶ ಇಂದು ಬೇರೆಯದೇ ಆದ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಪ್ರಜಾಪ್ರಭುತ್ವದ ಬಲ ಬದಲಾಗಿದೆ. ನ್ಯಾಯಾಂಗ ಸೇರಿದಂತೆ ಎಲ್ಲ ಸಂಸ್ಥೆಗಳು ದುರ್ಬಲಗೊಂಡಿದೆ ಎಂದು ಹೇಳಿದ್ದಾರೆ.
ತೃಣಮೂಲ ಕಾಂಗ್ರೆಸ್ ನಾಯಕ ಸುದೀಪ್ ಬಂಡೋಪಾಧ್ಯಾಯ, ಡರೆಕ್ ಒಬ್ರಿಯಾನ್ ಅವರ ಸಮ್ಮುಖದಲ್ಲಿ ಟಿಎಂಸಿಗೆ ಸೇರಿದ್ದಾರೆ.
ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ನಾಯಕತ್ವದಲ್ಲಿ ಕೇಸರಿ ಪಕ್ಷದಲ್ಲಿ ಕೆಲಸ ಮಾಡಿದ್ದ ಅವರು, ಅಟಲ್ ಜೀ ಅವರ ಅವಧಿಯಲ್ಲಿ ಬಿಜೆಪಿ ಒಮ್ಮತದಲ್ಲಿ ನಂಬಿಕೆ ಹೊಂದಿತ್ತು. ಇಂದಿನ ಸರ್ಕಾರ ಒಡೆದು ಆಳುವುದರಲ್ಲಿ ನಂಬಿಕೆ ಇಟ್ಟಿದೆ. ಅಕಾಲಿದಳ, ಬಿಜೆಡಿ ಬಿಜೆಪಿ ಜೊತೆಗಿಲ್ಲ. ಇಂದು ಯಾರಾದರೂ ಬಿಜೆಪಿಯೊಂದಿಗೆ ನಿಂತಿದ್ದಾರೆಯೇ ಎಂದು ಪ್ರಶ್ನಿಸಿದ್ದಾರೆ.
ಯಶ್ವಂತ್ ಸಿನ್ಹಾ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಅವಧಿಯಲ್ಲಿ ಹಲವಾರು ಹುದ್ದೆಗಳನ್ನು ನಿರ್ವಹಿಸಿದ್ದಾರೆ. ಚಂದ್ರಶೇಖರ್ ಪ್ರಧಾನಿಯಾಗಿದ್ದ ಸಂದರ್ಭದಲ್ಲಿ, ವಾಜಪೇಯಿ ಅವರ ಸಂಪುಟದಲ್ಲಿ ಹಣಕಾಸು, ವಿದೇಶಾಂಗ ಸಚಿವ ಸ್ಥಾನ ನಿರ್ವಹಿಸಿದ್ದಾರೆ.
ನಂದಿಗ್ರಾಮದಲ್ಲಿ ಮಮತಾ ಬ್ಯಾನರ್ಜಿ ಅವರ ಮೇಲೆ ನಡೆದ ದಾಳಿಯೇ ನಾನು ಟಿಎಂಸಿ ಸೇರಲು ಪ್ರಮುಖ ಕಾರಣ. ನಾನು ಮಮತಾ ಬ್ಯಾನರ್ಜಿ ಅವರನ್ನು ಬೆಂಬಲಿಸಲು ನಿರ್ಧಾರ ಕೈಗೊಂಡಿದ್ದೇನೆ ಎಂದು ಅವರು ತಿಳಿಸಿದ್ದಾರೆ.