ನವದೆಹಲಿ: ತಮಿಳುನಾಡು ವಿಧಾನಸಭೆ ಚುನಾವಣೆಗೆ ಆರು ತಿಂಗಳು ಬಾಕಿ ಇರುವಾಗಲೇ ಅನಿರೀಕ್ಷಿತ ರಾಜಕೀಯ ಚಟುವಟಿಕೆ ಗರಿಗೆದರಿವೆ.
ತಮಿಳುನಾಡಿನ ಮಾಜಿ ಸಿಎಂ ದಿ. ಕರುಣಾನಿಧಿ ಅವರ ಹಿರಿಯ ಪುತ್ರ ಹಾಗೂ ಕೇಂದ್ರದ ಮಾಜಿ ಸಚಿವ ಎಂ.ಕೆ. ಅಳಗಿರಿ ಹೊಸ ರಾಜಕೀಯ ಪಕ್ಷ ಸ್ಥಾಪನೆಗೆ ಮುಂದಾಗಿದ್ದಾರೆ. ಸಹೋದರ, ಡಿಎಂಕೆ ಮುಖ್ಯಸ್ಥ ಎಂ.ಕೆ. ಸ್ಟಾಲಿನ್ ಅವರಿಂದ ದೂರವಾಗಿ ಹೊಸ ಪಕ್ಷ ಸ್ಥಾಪಿಸಿ ಮುಖ್ಯಮಂತ್ರಿಯಾಗಲು ಕಾರ್ಯತಂತ್ರ ರೂಪಿಸುತ್ತಿದ್ದಾರೆ.
ಡಿಎಂಕೆಯಿಂದ ಹೊರಹಾಕಲ್ಪಟ್ಟ ಸುಮಾರು ಆರು ವರ್ಷಗಳ ನಂತರ ಅಳಗಿರಿ ಹೊಸ ಪಕ್ಷ ಸ್ಥಾಪನೆಗೆ ಕಾರ್ಯೋನ್ಮುಖರಾಗಿದ್ದು ಅವರ ಪಕ್ಷಕ್ಕೆ ಕಲೈನರ್ ಡಿಎಂಕೆ ಅಥವಾ ಕೆಡಿಎಂ ಎಂದು ಹೆಸರಿಡುವ ಸಾಧ್ಯತೆ ಇದೆ. ಅವರು ಪಕ್ಷ ಸ್ಥಾಪನೆಯ ಬಳಿಕ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಸೇರ್ಪಡೆಯಾಗಲಿದ್ದಾರೆ. ಈಗಾಗಲೇ ಅವರು ಬಿಜೆಪಿಯೊಂದಿಗೆ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. ನವೆಂಬರ್ 21 ರಂದು ಚೆನ್ನೈಗೆ ಅಮಿತ್ ಶಾ ಭೇಟಿ ನೀಡಲಿದ್ದು, ಈ ಸಂದರ್ಭದಲ್ಲಿ ಅಳಗಿರಿ ಭೇಟಿಯಾಗುವ ಸಾಧ್ಯತೆ ಇದೆ. ತಮಿಳುನಾಡಿನಲ್ಲಿ ಅಧಿಕಾರಕ್ಕೇರುವ ನಿಟ್ಟಿನಲ್ಲಿ ಬಿಜೆಪಿ ಎಲ್ಲಾ ಕಾರ್ಯತಂತ್ರ ರೂಪಿಸಿದ್ದು, ಅಳಗಿರಿ ಕೈ ಜೋಡಿಸಲಿದ್ದಾರೆ ಎಂದು ಹೇಳಲಾಗಿದೆ.