ಪೊಲೀಸರಿಗೆ ಪ್ರತಿಭಟನೆಯ ಬಗ್ಗೆ ಗೊತ್ತಿತ್ತು ಆದರೆ ಕ್ರಮ ಕೈಗೊಳ್ಳಲಿಲ್ಲ..?
ಹೌದು, ಪಂಜಾಬ್ ಪೊಲೀಸ್ ನ ಉನ್ನತ ಅಧಿಕಾರಿಗಳಿಗೆ ಪ್ರಧಾನಿ ಕಾರ್ಯಕ್ರಮದಲ್ಲಿ ಪ್ರತಿಭಟನೆ ನಡೆಯಬಹುದು ಎಂಬ ಮಾಹಿತಿ ತಿಳಿದಿದ್ದರೂ ಸೈಲೆಂಟ್ ಆಗಿದ್ದರು…! ಈ ಹೇಳಿಕೆ ನೀಡಿರುವುದು ಬೇರೆ ಯಾರು ಅಲ್ಲಾ, ಫಿರೋಜ್ ಪುರದ ಡೆಪ್ಯುಟಿ ಎಸ್ಪಿ ಸುಖ್ದೇವ್ ಸಿಂಗ್. ಸ್ಟಿಂಗ್ ಆಪರೇಷನ್ ನಲ್ಲಿ ಈ ಮಾಹಿತಿ ಬಯಲಾಗಿದ್ದು, ರಾಜ್ಯ ಗುಪ್ತಚರ ಇಲಾಖೆಗಳ ವಿಫಲತೆ ಬಗ್ಗೆ ಕೇಳಿದಾಗ ಸುಖ್ದೇವ್ ಸಿಂಗ್ ಅವರು ಪಿಎಂ ಅವರ ನಿಗದಿತ ರ್ಯಾಲಿಗೆ ತಲುಪುವ ನಿರ್ಣಾಯಕ ರಸ್ತೆಗಳಲ್ಲಿ ವಾಹನ ಸಂಚಾರವನ್ನು ನಿಲ್ಲಿಸಲು ಮತ್ತು ಬಿಜೆಪಿ ಕಾರ್ಯಕರ್ತರನ್ನು ತಡೆಯಲು ಪ್ರತಿಭಟನಾಕಾರರು ಯೋಜನೆ ಮಾಡಿದ್ದರು, ಈ ಬಗ್ಗೆ ಜನವರಿ 2 ರಂದೇ ಎಡಿಜಿಪಿ ಅವರಿಗೆ ಮಾಹಿತಿ ನೀಡಿದ್ದೆವು. ಪ್ರತಿಭಟನಾಕಾರರು ಕಾರ್ಯಕ್ರಮದ ಪೆಂಡಾಲ್ ಗೆ ತಲುಪಲು ಯೋಜನೆ ಹಾಕಿಕೊಂಡಿದ್ದಾರೆ, ಪೊಲೀಸರು ತಡೆದರೆ ಅದೇ ಸ್ಥಳದಲ್ಲಿ ಕುಳಿತು ಧರಣಿ ಮಾಡುತ್ತಾರೆ ಎಂದು ನಂತರದಲ್ಲಿ ಮಾಹಿತಿ ನೀಡಿದ್ದೆವು ಎಂದಿದ್ದಾರೆ.
ಪಿಎಂ ಭೇಟಿಯ ದಿನದಂದು, ಪ್ರತಿಭಟನೆಗಳ ಬಗ್ಗೆ ಗುಪ್ತಚರ ಮಾಹಿತಿಗಳನ್ನು ಪೊಲೀಸ್ ಸಿಬ್ಬಂದಿ ವಿನಿಮಯ ಮಾಡಿಕೊಳ್ಳುತ್ತಿದ್ದರು ಎಂದು ಇಂಡಿಯಾ ಟುಡೇ ವರದಿಯಲ್ಲಿ ತಿಳಿದು ಬಂದಿದೆ. ಇಷ್ಟಾದರೂ ಮಾರ್ಗವನ್ನು ತೆರವುಗೊಳಿಸಿಲ್ಲ. ಪ್ರತಿಭಟನಾಕಾರರ ಚಲನವಲನದ ಬಗ್ಗೆ ಹಿರಿಯ ಪೊಲೀಸ್ ವರಿಷ್ಠಾಧಿಕಾರಿಗೆ ಸಂದೇಶ ಕಳುಹಿಸಿರುವುದಾಗಿ ಡಿಎಸ್ಪಿ ಸುಖದೇವ್ ಸಿಂಗ್ ಹೇಳಿದ್ದಾರೆ. ಅವರು ತಮ್ಮ ಫೋನ್‌ನಲ್ಲಿರುವ ಸಂದೇಶಗಳನ್ನು ತೋರಿಸಿದ್ದಾರೆ.
ಬೆಳಗ್ಗೆ 11.45ಕ್ಕೆ ಪ್ರತಿಭಟನಾಕಾರರು ಜಮಾಯಿಸಿ ಮೊಗಾ ರಸ್ತೆಯತ್ತ ತೆರಳಿದ್ದು, 12.20ಕ್ಕೆ ಫಿರೋಜ್‌ಶಾ ಬ್ಯಾರಿಕೇಡ್ ಮುರಿದು ಅವರು ಮೋದಿ ಬರುವ ಮಾರ್ಗದಲ್ಲಿಯೇ ಸಾಗುತ್ತಿದ್ದದ್ದು, 200-225 ಪ್ರತಿಭಟನಕಾರರು ಪಿಎಂ ಬರುವ ರಸ್ತೆಯನ್ನ ತಡೆದಿದ್ದಾರೆ ಎಂದು 12:45ಕ್ಕೆ ಸುಖದೇವ್ ಸಿಂಗ್ ಹಿರಿಯ ಪೊಲೀಸ್ ವರಿಷ್ಠಾಧಿಕಾರಿಗೆ ಸಂದೇಶದ ಮೂಲಕ ಮಾಹಿತಿ ನೀಡಿದ್ದರು. ಆ ಮೆಸೇಜ್ ಗಳನ್ನ ಅಧಿಕಾರಿ ಓದಿದ್ದರು ಕೂಡ.
ಮಧ್ಯಾಹ್ನ 12.50 ಕ್ಕೆ, ಭಟಿಂಡಾದ ಹಿರಿಯ ಪೊಲೀಸ್ ಅಧೀಕ್ಷಕರಿಂದ ನನಗೆ ಕರೆ ಬಂದಿತು, ಅವರು ಟ್ರಾಫಿಕ್ ಜಾಮ್ ಇದೆಯೇ ಎಂದು ಕೇಳಿದರು. ನಿಜವಾಗಿಯೂ ಇಲ್ಲಿ ಜಾಮ್ ಆಗಿದೆ ಮತ್ತು ಇಡೀ ಪ್ರದೇಶವನ್ನು ನಿರ್ಬಂಧಿಸಲಾಗಿದೆ ಎಂದು ನಾನು ಅವರಿಗೆ ಹೇಳಿದೆ ಎಂದು ಸುಖ್ದೇವ್ ಹೇಳಿದ್ದಾರೆ. ಪಂಜಾಬ್ ಪ್ರವಾಸದ ವೇಳೆ ಪ್ರಧಾನಿ ಮೋದಿ ಅವರ ಮೇಲೆ ಚಪ್ಪಲಿ ಎಸೆದವರಿಗೆ 1 ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ಫ್ರಿಂಜ್ ಗ್ರೂಪ್ ಸಿಖ್ಸ್ ಫಾರ್ ಜಸ್ಟೀಸ್ ಘೋಷಿಸಿದೆ ಎಂದು ಡಿಎಸ್‌ಪಿ ಸುಖದೇವ್ ಸಿಂಗ್ ತಿಳಿಸಿದ್ದಾರೆ. ಅಲ್ಲದೆ ನಮ್ಮ ಬಳಿ ಜನವರಿ 4 ರಂದೇ ಈ ಮಾಹಿತಿ ಇತ್ತು ಎಂದು ಹೇಳಿದ್ದಾರೆ.
ಇತ್ತ ಪ್ರತಿಭಟನೆ ನಡೆದ ವ್ಯಾಪ್ತಿಯ ಪ್ರದೇಶದ ಪೊಲೀಸರಿಂದಲೂ, ಶಾಕಿಂಗ್ ಮಾಹಿತಿ ದೊರೆತಿದೆ. ಪ್ರತಿಭಟನೆ ನಡೆಯುತ್ತಿದ್ದರೂ ಸರ್ಕಾರದಿಂದ ಪ್ರತಿಭಟನಕಾರರನ್ನು ಚದುರಿಸುವ ಆದೇಶ ಬಂದಿರಲಿಲ್ಲ ಎಂದು ಕುಲ್ಗಾರಿಯ ಪೊಲೀಸ್ ಅಧಿಕಾರಿ ಬೀರ್ಬಲ್ ಸಿಂಗ್ ಹೇಳಿದ್ದಾರೆ. ಅಂದು ಫಿರೋಜ್‌ಪುರದಲ್ಲಿ ಜಮಾಯಿಸಿದ್ದವರು ಪ್ರತಿಭಟನಾಕಾರ ರೈತರಲ್ಲ, ಆದರೆ ರೈತರ ವೇಷದಲ್ಲಿದ್ದ ಮೂಲಭೂತವಾದಿಗಳು ಎಂದು ಬೀರ್ಬಲ್ ಸಿಂಗ್ ಆರೋಪಿಸಿದ್ದಾರೆ.
ಪಿಎಂ ಚಲಿಸುತ್ತಿದ್ದ ರಸ್ತೆಯಲ್ಲಿದ್ದ ಅಂಗಡಿಗಳೇ ಬಂದ್ ಆಗಿರಲಿಲ್ಲ…!
ಪಿಎಂ ಅವರ ಕಾನ್ವಾಯ್ ರಸ್ತೆಯಲ್ಲಿ ಸಿಲುಕಿಕೊಂಡಿದ್ದ ಸಂದರ್ಭದಲ್ಲಿ ಅದೇ ರಸ್ತೆಯ ಬಳಿಯಿದ್ದ ಲಿಕ್ಕರ್ ಶಾಪ್ ಒಂದು ತೆರೆದೇ ಇತ್ತು. ಆ ವೇಳೆ ನಾನು ಅಂಗಡಿಯಲ್ಲಿ ಇದ್ದೆ ಎಂದು ಮಾಲೀಕ ಬಿಕಿರ್ ಒಪ್ಪಿಕೊಂಡಿದ್ದಾರೆ. ಅಲ್ಲದೇ ಅಂದು ಪ್ರತಿಭಟನೆ ನಡೆಸಿದವರು ಇಲ್ಲಿಯವರೆಂದು ಅನ್ನಿಸಲಿಲ್ಲ, ಬದಲಿಗೆ ಬೇರೆ ಪ್ರದೇಶದವರಂತೆ ಕಾಣಿಸುತ್ತಿದ್ದರು ಎಂದು ಬಿಕಿರ್ ಹೇಳಿದ್ದಾರೆ.
ಪಿರೋಜ್ ಪುರ ಘಟನೆಗೆ ಪ್ಯಾರೇಗಾಂವ್ ಮುಖ್ಯಸ್ಥ ಹೇಳಿದ್ದೇನು..?
ಫಿರೋಜ್ ಪುರ ಸಮೀಪದ ಹಳ್ಳಿ ಪ್ಯಾರೇಗಾಂವ್. ಅಲ್ಲಿನ ಸರ್ಪಂಚ್ ಪ್ರಕಾರ, ಪ್ರತಿಭಟನಾಕಾರರು ಗ್ರಾಮಸ್ಥರನ್ನ ಗುರುದ್ವಾರದ ಬಳಿ ಜಮಾಯಿಸಲು ತಿಳಿಸಿದ್ದರು. ಗ್ರಾಮಸ್ಥರ ಬಳಿ ರಸ್ತೆ ತಡೆ ನಡೆಸಿದ ರೈತರಿಗೆ ಸಹಾಯ ಕೋರಿದ್ದರು, ಇದು ಪ್ರಧಾನಿ ಮೋದಿ ಆಗಮನಕ್ಕೆ ಹತ್ತು ನಿಮಿಷಗಳ ಮೊದಲು ನಡೆದಿದೆ ಎಂದು ಸರ್ಪಂಚ್ ನಿಚತ್ತರ್ ಸಿಂಗ್ ಹೇಳಿದ್ದಾರೆ. ಅಲ್ಲದೇ ಇಲ್ಲಿಗೆ ಬಂದ ಕಿಸಾನ್ ಯೂನಿಯನ್ ಯುವಕರ ಕೈಗಳಲ್ಲಿ ಲಾಠಿಗಳು ಇದ್ದವು, ಅವರೇ ಗ್ರಾಮದವರನ್ನ ಗುರುದ್ವಾರದ ಬಳಿ ಸೇರಲು ಕೇಳಿದ್ದು ಎಂದು ಸರ್ಪಂಚ್ ಹೇಳಿದ್ದಾರೆ.
ಒಟ್ಟಿನಲ್ಲಿ ಈ ತನಿಖಾ ವರದಿಯಿಂದ ಸಂಪೂರ್ಣ ಘಟನೆಯ ಸಣ್ಣ ಭಾಗ ತೆರೆದುಕೊಂಡಿದೆ, ಇದು ಎಷ್ಟು ಸತ್ಯ ಎನ್ನುವುದು ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯ ತನಿಖೆಯ ನಂತರ ಮಾತ್ರ ಬಹಿರಂಗಗೊಳ್ಳುತ್ತದೆ.