ಶಿವಮೊಗ್ಗ: ರಾಷ್ಟ್ರೀಯ ಹೆದ್ದಾರಿ 169ಎ ಆಗುಂಬೆ ಘಾಟಿಯಲ್ಲಿ(33.00 ರಿಂದ 51.60 ರವರೆಗೆ) ನಿಯತಕಾಲಿಕ ದುರಸ್ತಿ ಹಿನ್ನೆಲೆಯಲ್ಲಿ ಮಾ.5 ರಿಂದ 15 ರವರೆಗೆ ಬೆಳಿಗ್ಗೆ 7 ರಿಂದ ರಾತ್ರಿ 7 ಗಂಟೆವರೆಗೆ ಕೆಳಕಂಡ ಪರ್ಯಾಯ ಮಾರ್ಗಗಳಲ್ಲಿ ವಾಹನಗಳ ಸಂಚಾರಕ್ಕೆ ವ್ಯವಸ್ಥೆ ಮಾಡಿ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.
ಪ್ರಸ್ತುತ ಸಂಚರಿಸುತ್ತಿರುವ ಮಾರ್ಗ ರಾಷ್ಟ್ರೀಯ ಹೆದ್ದಾರಿ 169ಎ ಆಗುಂಬೆ ಘಾಟಿ ಶಿವಮೊಗ್ಗ-ತೀರ್ಥಹಳ್ಳಿ-ಆಗುಂಬೆ-ಉಡುಪಿ-ಮಂಗಳೂರು ಆಗಿದ್ದು, ಇದಕ್ಕೆ ಪರ್ಯಾಯ ಮಾರ್ಗವಾಗಿ ಲಘುವಾಹನಗಳು-ಶಿವಮೊಗ್ಗ-ತೀರ್ಥಹಳ್ಳಿ-ಕೊಪ್ಪ-ಶೃಂಗೇರಿ-ಮಾಳಾ ಘಾಟ್-ಕಾರ್ಕಳ-ಉಡುಪಿ(ಎನ್‍ಹೆಚ್ 169)ಮುಖಾಂತರ ಚಲಿಸುವುದು. ಹಾಗೂ ಭಾರೀ ವಾಹನಗಳು-ಶಿವಮೊಗ್ಗ-ಆಯನೂರು-ಆನಂದಪುರ-ಸಾಗರ-ಹೊನ್ನಾವರ(ಎನ್‍ಹೆಚ್ 69 ಅಥವಾ ಎನ್‍ಹೆಚ್ 206)ಮುಖಾಂತರ ಚಲಿಸಬೇಕೆಂದು ಆದೇಶಿಸಲಾಗಿದೆ.
ಶಿವಮೊಗ್ಗ –ಉಡುಪಿ ಜಿಲ್ಲೆಗಳಿಗೆ ಆಗುಂಬೆ ಮಾರ್ಗ ಪ್ರಮುಖ ಸಂಪರ್ಕ ರಸ್ತೆಯಾಗಿದೆ. ಆಸ್ಪತ್ರೆ, ದೇವಾಲಯಗಳು, ಪ್ರವಾಸಿ ತಾಣಗಳಿಗೆ ಹೆಚ್ಚಿನ ಜನ ಇದೇ ಮಾರ್ಗವಾಗಿ ಹೋಗಿ ಬರುತ್ತಾರೆ.