ಶಿವಮೊಗ್ಗ: ರಾಷ್ಟ್ರೀಯ ಹೆದ್ದಾರಿ 169ಎ ತೀರ್ಥಹಳ್ಳಿ-ಮಲ್ಪೆ ರಸ್ತೆಯ ಆಗುಂಬೆ ಘಾಟಿಯಲ್ಲಿ 6,7 ಮತ್ತು 11 ನೇ ತಿರುವಿನಲ್ಲಿ ಭಾರೀ ಮಳೆ ಮತ್ತು ಭಾರೀ ವಾಹನಗಳ ಓಡಾಟದಿಂದಾಗಿ ಸಣ್ಣ ಬಿರುಕುಗಳು ಹಾಗೂ ಅಲ್ಲಲ್ಲಿ ರಸ್ತೆ ಕುಸಿತ ಕಂಡು ಬಂದಿದೆ. ಅಲ್ಲದೇ ಹೆಚ್ಚಿನ ಮಳೆಯಿಂದಾಗಿ ತಡೆಗೋಡೆ ಕುಸಿದಿದ್ದು, ಅಪಘಾತದ ಸಂಭವವಿರುವುದರಿಂದ ತಾತ್ಕಾಲಿಕವಾಗಿ ಭಾರೀ ವಾಹನ ಸಂಚಾರ ನಿಷೇಧಿಸಿ ಬದಲಿ ಮಾರ್ಗಗಳಲ್ಲಿ ಸಂಚರಿಸುವಂತೆ ಜಿಲ್ಲಾಧಿಕಾರಿ ಡಾ.ಆರ್. ಸೆಲ್ವಮಣಿ ಆದೇಶಿಸಿದ್ದಾರೆ.
ಸೆ. 15ರವರೆಗೆ ಈ ರಸ್ತೆಯಲ್ಲಿ ಭಾರೀ ವಾಹನ ಸಂಚಾರ ನಿಷೇಧಿಸಿದ್ದು, ಲಘು ವಾಹನಗಳ ಸಂಚಾರಕ್ಕೆ ಮಾತ್ರ ಅನುವು ಮಾಡಲಾಗಿದೆ. ಭಾರೀ ವಾಹನಗಳು ಪರ್ಯಾಯ ಮಾರ್ಗದಲ್ಲಿ ಸಂಚರಿಸಲು ಆದೇಶಿಸಲಾಗಿದೆ.
ತೀರ್ಥಹಳ್ಳಿ-ಉಡುಪಿ ಮಾರ್ಗದಲ್ಲಿ ಚಲಿಸುವ ಭಾರೀ ವಾಹನಗಳು ತೀರ್ಥಹಳ್ಳಿ –ಆಗುಂಬೆ –ಶೃಂಗೇರಿ –ಮಾಳಾಘಾಟ್ –ಕಾರ್ಕಳ -ಉಡುಪಿ ಮಾರ್ಗ ಹಾಗೂ ತೀರ್ಥಹಳ್ಳಿ –ಮಾಸ್ತಿಕಟ್ಟೆ –ಸಿದ್ದಾಪುರ –ಕುಂದಾಪುರ -ಉಡುಪಿ ಮಾರ್ಗದಲ್ಲಿ ಸಂಚರಿಸುವಂತೆ ಆದೇಶಿಸಿದ್ದಾರೆ.